ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರದ ಕಪಿಮುಷ್ಟಿಯಲ್ಲಿದ್ದಾರೆ: ದಿನೇಶ್ ಗುಂಡೂರಾವ್
ಸೋಮವಾರ ದ.ಕ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಂದರ್ಭ ವಿಶೇಷ ಅಧಿವೇಶನದಲ್ಲಿ ಭಾಷಣದ ಕುರಿತಂತೆ ಉಂಟಾದ ವಿವಾದಕ್ಕೆ ಸಂಬಂಧಿಸಿ ರಾಜ್ಯಪಾಲರು ರಾಷ್ಟ್ರಪತಿಗೆ ವಿವರ ನೀಡಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ರಾಜ್ಯಪಾಲರ ಕೆಲಸ ಕಾರ್ಯಗಳ ಬಗ್ಗೆ ನಮ್ಮ ಆಕ್ಷೇಪವಿಲ್ಲ. ರಾಜ್ಯಪಾಲರ ಭಾಷಣಕ್ಕೆ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಆದರೆ ಅವರ ನಡೆ ಕಂಡಾಗ ಅವರು ಕೇಂದ್ರದ ಕಪಿಮುಷ್ಟಿಯಲ್ಲಿರುವುದು, ಬಿಜೆಪಿ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬರುತ್ತಿದ್ದು, ಇದು ರಾಜ್ಯಗಳ ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದರು.
ದ್ವೇಷ ಭಾಷಣ ಮಸೂದೆ ಜಾರಿಯಾಗದಿದ್ದರೂ ನೋಟೀಸು ಜಾರಿಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಯವರು ದ್ವೇಷ ಭಾಷಣ ಮಾಡುತ್ತಿದ್ದಾರೆಯೇ, ಅವರಿಗೇಕೆ ಆತಂಕ ಎಂದು ಪ್ರಶ್ನಿಸಿದರು.
ಯಾವುದೇ ಪಕ್ಷ, ಸಂಘಟನೆ, ವ್ಯಕ್ತಿ ಎಲ್ಲರಿಗೂ ಈ ಕಾನೂನು ಅನ್ವಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಮಾತುಗಳು, ಸುಳ್ಳಿನ ಮಾತು, ಸುಳ್ಳು ಆಧಾರದ ಮೇಲೆ ಸೃಷ್ಟಿ ಮಾಡುವ ಸುದ್ದಿಗಳು, ವಾಸ್ತವಾಂಶಕ್ಕಿಂತ ಮುಂಚಿತವಾಗಿ ಅಭಿಪ್ರಾಯ ನೀಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದು ಸಮಾಜವನ್ನು ಒಡೆಯುವ ಕೆಲಸವಾಗುತ್ತಿದ್ದು, ಅದನ್ನು ನಿಯಂತ್ರಿಸುವುದು ಸರಕಾರದ ಕೆಲಸ. ಬಿಜೆಪಿಯವರಿಗೆ ಯಾಕೆ ಭಯ, ಕೇಂದ್ರದಲ್ಲಿ ಬಿಜೆಪಿಯವರು ಕಾನೂನು ಮೂಲಕ ಯಾವ ರೀತಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಕೇಂದ್ರದ ವಿರುದ್ಧ ಮಾತನಾಡಿದರೆ ಉಸಿರುಗಟ್ಟಿಸುವ ವಾತಾವರಣ ಇದೆ. ಪ್ರಧಾನಿ ಮೋದಿ, ಅಮಿತ್ ಶಾ ರೀತಿ ನಾವು ಮಾಡಿಲ್ಲ ಎಂದು ಹೇಳಿದರು.