ಒತ್ತಡ ಮತ್ತು ಉದ್ವೇಗವನ್ನು ನಿಯಂತ್ರಿಸಲು ಯೋಗ: ಸ್ವಾಮಿ ಜಿತಕಾಮಾನಂದಜೀ ಮಹಾರಾಜ್

ಒತ್ತಡ ಮತ್ತು ಉದ್ವೇಗವನ್ನು ನಿಯಂತ್ರಿಸಲು ಯೋಗ: ಸ್ವಾಮಿ ಜಿತಕಾಮಾನಂದಜೀ ಮಹಾರಾಜ್


ಮಂಗಳೂರು: ಯೋಗವು ಸ್ನಾಯುಗಳ ನಡುವೆ ಸಿಕ್ಕಿಬಿದ್ದ ಒತ್ತಡದ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಋಣಾತ್ಮಕತೆಯನ್ನು ತೊಡೆದುಹಾಕಿ ಒತ್ತಡ ಮತ್ತು ಉದ್ವೇಗವನ್ನು ನಿಯಂತ್ರಿಸಲು ಕೆಲವು ಯೋಗಾಸನಗಳು ಸಹಕಾರಿಯಾಗುತ್ತವೆ ಎಂದು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಹೇಳಿದರು.


ಅವರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ಎರಡು ವಾರಗಳ ಕಾಲ ನಡೆದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ನಡೆಸಿದ ಯೋಗ ಶಿಬಿರ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.


ನಿಮ್ಮ ಮನಸ್ಸು, ದೇಹ ಮತ್ತು ಪರಿಸರದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಒತ್ತಡ ಮತ್ತು ಆತಂಕದ ಭಾವನೆಗಳನ್ನು ಕಡಿಮೆ ಮಾಡಲು ಯೋಗವು ಸಹಾಯ ಮಾಡುತ್ತದೆ. ಕೆಲವು ಭಂಗಿಗಳು ಮತ್ತು ಉಸಿರಾಟದ ತಂತ್ರಗಳ ಮೂಲಕ, ನಿಮ್ಮ ಸ್ವಂತ ವೇಗದಲ್ಲಿ ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸಲು ಸಹಕರಿಸುತ್ತದೆ. ಒತ್ತಡದ ಸಮಯದಲ್ಲಿ ಆತಂಕದ ಭಾವನೆಗಳು ಹರಿದಾಡಲು ಪ್ರಾರಂಭಿಸಿದಾಗ ಹಿಡಿತದಲ್ಲಿಟ್ಟುಕೊಳ್ಳಲು ಯೋಗವು ಸಹಕಾರಿಯಾಗುತ್ತದೆ. ಮತ್ತು ನಿಮ್ಮ ಒಟ್ಟಾರೆ ಮನಸ್ಥಿತಿಯ ಚಿರಂತನವಾದ ಶಾಂತಿಯನ್ನು ಪಡೆಯಲು ಯೋಗವು ಸಹಾಯ ಮಾಡುತ್ತದೆ ಎಂದು ತಿಳಿಸಿದರು.


ಶಿಬಿರದ ಸಮಾರೋಪ ಸಮಾರಂಭದಲ್ಲಿ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ನಿಯಮಿತ ಯೋಗಾಭ್ಯಾಸವು ಮಾನಸಿಕ ಸ್ಪಷ್ಟತೆ ಮತ್ತು ಶಾಂತತೆಯನ್ನು ಸೃಷ್ಟಿಸುತ್ತದೆ, ದೇಹದ ಅರಿವನ್ನು ಹೆಚ್ಚಿಸುತ್ತದೆ, ದೀರ್ಘಕಾಲದ ಒತ್ತಡವನ್ನು ನಿವಾರಿಸುತ್ತದೆ, ಮನಸ್ಸನ್ನು ವಿಶ್ರಾಂತಿಯಿಂದ ಇರುವಂತೆ ಮಾಡುತ್ತದೆ, ಗಮನ ಮತ್ತು ಏಕಾಗ್ರತೆಯನ್ನು ತೀಕ್ಷ್ಣಗೊಳಿಸುತ್ತದೆ. ದೈನಂದಿನ ಜೀವನದಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಒತ್ತಡದಂತಹಾ ಸಾಮಾನ್ಯ ಸಮಸ್ಯೆಯನ್ನು ನಿಯಂತ್ರಿಸಲು ಮತ್ತು ಏಕಾಗ್ರತೆಯನ್ನು ತೀಕ್ಷ್ಣಗೊಳಿಸಲು ಯೋಗವು ಸಹಾಯ ಮಾಡುತ್ತದೆ ಎಂದು ತಿಳಿಸಿದರು.


ದೇಲಂಪಾಡಿ ಶಿಷ್ಯರಾದ ಸುಮಾ, ಭಾರತಿ ಹಾಗೂ ಚಂದ್ರಹಾಸ ಬಾಳ ಅವರು ಸಹಕರಿಸಿದರು. ಯೋಗ ತರಬೇತಿ ನೀಡಿದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಶಿಬಿರಾರ್ಥಿಗಳು ಗೌರವಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article