ಡಿಮಾರ್ಟ್ ಉದ್ಯೋಗಾವಕಾಶ: ಬೇಸ್ತು ಬಿದ್ದ ಯುವ ಜನತೆ
ಸಾಮಾಜಿಕ ಜಾಲತಾಣವನ್ನ ಎಷ್ಟರ ಮಟ್ಟಿಗೆ ದುರುಪಯೋಗ ಪಡಿಸಬಹುದೆಂಬುದಕ್ಕೆ ಕುಂಪಲ -ಬೈಪಾಸಿನ ನೂತನ ಡಿಮಾರ್ಟ್ ನಲ್ಲಿ ಉದ್ಯೋಗಾವಕಾಶದ ಜಾಹಿರಾತು ಹರಿಯಬಿಟ್ಟ ಬೆಳವಣಿಗೆಯೇ ನಿದರ್ಶನ.
ಕುಂಪಲ- ಬೈಪಾಸ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಡಿಮಾರ್ಟ್ ಶಾಪಿಂಗ್ ಮಾಲ್ ಗೆ ಸಿಬ್ಬಂದಿಗಳು ಬೇಕಾಗಿದ್ದು, ಅನಕ್ಷರಸ್ಥರಿಂದ ಹಿಡಿದು ಪದವೀಧರರಿಗೂ ಉದ್ಯೋಗಾವಕಾಶಗಳು ಲಭ್ಯವಿದೆಯೆಂಬ ಜಾಹಿರಾತನ್ನು ಹರಿಯಬಿಟ್ಟಿದ್ದು ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ ಜಾಹಿರಾತಿನಲ್ಲಿ ಡಿಮಾರ್ಟ್ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಫೋನ್ ನಂಬರ್, ಈಮೇಲ್ ವಿಳಾಸಗಳನ್ನು ಹಾಕಿಲ್ಲ. ಅನೇಕ ಮಂದಿ ಸುಶಿಕ್ಷಿತರು ಕೂಡ ಇಂತಹ ಜಾಹಿರಾತುಗಳನ್ನ ಸರಿಯಾಗಿ ಪರಿಶೀಲಿಸದೆ ವಿವಿಧ ವಾಟ್ಸಪ್ ಗ್ರೂಪ್ಗಳಿಗೆ ನೂಕಿದ್ದಲ್ಲದೆ, ತಮ್ಮ ಸ್ಟೇಟಸ್ ಗಳಿಗೂ ಅಪ್‌ಲೋಡ್ ಮಾಡಿದ್ದರು.
ಇದನ್ನೇ ನಂಬಿದ ಯುವಕ-ಯುವತಿಯರು ನಿನ್ನೆಯಿಂದ ಬೈಪಾಸಿನ ಡಿಮಾರ್ಟ್ ಎದುರಲ್ಲಿ ಜಮಾಯಿಸಿದ್ದು ಕೆಲಸಕ್ಕಾಗಿ ಮುಗಿ ಬಿದ್ದಿದ್ದಾರೆ. ಅಸಲಿಗೆ ಡಿಮಾರ್ಟ್ ಸಂಸ್ಥೆಯು ಉದ್ಯೋಗಾವಕಾಶದ ಬಗ್ಗೆ ಯಾವುದೇ ಜಾಹಿರಾತು ನೀಡಿಲ್ಲವೆಂದು ಉದ್ಯೋಗ ಅರಸಿ ಬಂದ ಜನರಲ್ಲಿ ಡಿಮಾರ್ಟ್ ಸೆಕ್ಯುರಿಟಿ ಸಿಬ್ಬಂದಿ ಸಮಜಾಯಿಷಿ ನೀಡಿ ಬೇಸ್ತು ಬಿದ್ದಿದ್ದಾರೆ.
ಇದೇ ಫೆಬ್ರವರಿ ತಿಂಗಳ ಕೊನೆಯೊಳಗೆ ಡಿಮಾರ್ಟ್ ಶಾಪಿಂಗ್ ಮಾಲ್ ವಹಿವಾಟು ಆರಂಭಿಸಲಿದ್ದು, ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ನಿನ್ನೆಯಿಂದ ಸುಮಾರು ಐನೂರಕ್ಕೂ ಅಧಿಕ ಮಂದಿ ಇಲ್ಲಿಗೆ ಉದ್ಯೋಗ ಅರಸಿ ಬರುತ್ತಲೇ ಇದ್ದಾರೆಂದು ಡಿಮಾರ್ಟ್ ಶಾಪಿಂಗ್ ಮಾಲ್‌ನ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.