ಮಂಗಳೂರು ಡೇಟಾ ಸೆಂಟರ್-ಇನ್ನಷ್ಟು ಕ್ರಿಯಾ ಯೋಜನೆ ಅಗತ್ಯವಿದೆ: ಸಿಇಒ ಸಂಜೀವ್ ಕುಮಾರ್ ಗುಪ್ತಾ ಸಲಹೆ
ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಸಿಲಿಕಾನ್ ಬೀಚ್ ಸ್ಟಾರ್ಟ್‌ಅಪ್ ಸಮಾವೇಶ ‘ಟೈಕಾನ್ ಮಂಗಳೂರು 2026’ರಲ್ಲಿ ಅವರು ದಿಕ್ಸೂಚಿ ಭಾಷಣ ನೀಡಿದರು.
ಈ ಕಾರ್ಯಕ್ರಮ ಮಂಗಳೂರು ಐಟಿ ವಲಯ ಹೊಸ ಅಲೆಯ ಆರಂಭವಾಗಿದೆ. ಐಟಿ ಕ್ಷೇತ್ರದಲ್ಲಿ ಮಂಗಳೂರು ಕೂಡಾ ದಾಪುಗಾಲಿಡುತ್ತಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ 35 ಕಂಪೆನಿಗಳು ಕಾರ್ಯಾರಂಭಿಸಿದ್ದು, 10ಕ್ಕೂ ಅಧಿಕ ಜಿಸಿಸಿಗಳು ಇಲ್ಲಿಂದ ಕಾರ್ಯ ನಿರ್ವಹಿಸುತ್ತಿವೆ. 1,000 ಕೋಟಿ ರೂ.ಗಳ ವ್ಯವಹಾರ ಸುಲಭದ ಮಾತಲ್ಲ. ಮಂಗಳೂರು ಐಟಿ ವಲಯವನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದವರು ಹೇಳಿದರು.
ಕಳೆದ ಒಂದೂವರೆ ವರ್ಷಗಳಲ್ಲಿ ಕರ್ನಾಟಕವು ಸ್ಟಾರ್ಟ್‌ಅಪ್ ವ್ಯವಸ್ಥೆಯ ವಿಶ್ವ ರ‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನದಿಂದ ೧೪ಕ್ಕೆ ಏರಿದೆ. ಭಾರತದಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಕರ್ನಾಟಕ ತಂತ್ರಜ್ಞಾನ ಕ್ಷೇತ್ರದಲ್ಲಿ ಯೂನಿಕಾರ್ನ್, ಟೆಕ್, ಪೇಟೆಂಟ್ ರಾಜಧಾನಿಯಾಗಿ ಹೊರಹೊಮ್ಮಿದೆ. ಮಂಗಳೂರು ಕೂಡಾ ಐಟಿ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದ್ದು, ಪ್ರಸಕ್ತ ಮಂಗಳೂರಿನಲ್ಲಿ ಐಟಿ ಕಂಪನಿಗಳಿಗೆ ಬೇಕಾದ 100 ಸಾವಿರ ಚದರ ಅಡಿಯ ಸುಸಜ್ಜಿತ ಮೂಲಸೌಕರ್ಯದ ವ್ಯವಸ್ಥೆ ಇದೆ. ಮುಂದಿನ ಒಂದು ವರ್ಷದಲ್ಲಿ ಇಲ್ಲಿ ಐದು ಐಟಿ ಪಾರ್ಕ್ಗಳು ತಲೆಯೆತ್ತಲಿವೆ. ಈ ಬೆಳವಣಿಗೆಯು 4,500 ಕೋಟಿ ರೂ.ಗಳ ವ್ಯವಹಾರದ ನಿರೀಕ್ಷೆಯನ್ನು ಹೊಂದಿದ್ದು, ಇದು 10,000 ಕೋಟಿ ರೂ.ಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಮಂಗಳೂರು ಐಟಿ ವಲಯದಲ್ಲಿ ಕೈಗಾರಿಕಾ ಆಧರಿತ ಬೆಳವಣಿಗೆಯು ಇದಕ್ಕೆಲ್ಲಾ ಕಾರಣವಾಗಿದೆ.
ಮಂಗಳೂರು ಹೊಸ ಅಲೆಯತ್ತ ಕೇವಲ ಹೂಡಿಕೆ ಆಕರ್ಷಣೆಯತ್ತ ಮಾತ್ರವಲ್ಲದೆ, ಐಟಿ ಕ್ಷೇತ್ರದಲ್ಲಿಯೂ ಹೊಸ ರೂಪು ಪಡೆಯುತ್ತಿದೆ. ವರ್ಕ್ ವರ್ಕ್ ನ ಸ್ಥಾಪಕ ರೋಹಿತ್ ಭಟ್ ರಂತೆ ಇನ್ನೂ ಹಲವು ಯುವ ಉದ್ಯಮಿಗಳು ಕೆಡಿಎಂ ಜತೆ ಕೈಜೋಡಿಸಬೇಕಾಗಿದೆ. ಮೂರು ವರ್ಷಗಳ ಹಿಂದೆ ಸಣ್ಣ ಮಗುವಿನಂತಿದ್ದ ಮಂಗಳೂರು ಐಟಿ ವಲಯ ಇಂದು ದೊಡ್ಡದಾಗಿ ಬೆಳೆದಿದೆ. ಇದು ಮತ್ತಷ್ಟು ಕ್ಷಿಪ್ರಗತಿಯಲ್ಲಿ ವೇಗ ಪಡೆದುಕೊಳ್ಳುವಲ್ಲಿ ಸರಕಾರದ ಜೊತೆ ಉದ್ದಿಮೆ ಹಾಗೂ ಉದ್ಯಮಿಗಳು ಕೈಜೋಡಿಸಬೇಕು ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟೈ ಮಂಗಳೂರು ಚಾಪ್ಟರ ಸ್ಥಾಪಕಾಧ್ಯಕ್ಷ ರೋಹಿತ್ ಭಟ್, ಶೈಕ್ಷಣಿಕ ಹಬ್ ಆಗಿರುವ ಕರಾವಳಿಯ ವಿಶ್ವವಿದ್ಯಾನಿಲಯಗಳ ಜತೆ ಸಂಪರ್ಕವಿರಿಸಿಕೊಂಡು ಯುವ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಕೇವಲ ಉದ್ಯೋಗ ಗಳಿಸುವುದು ಮಾತ್ರವಲ್ಲ, ಉದ್ಯೋಗದಾತರಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ನೀಡುವ ನಿಟ್ಟಿನಲ್ಲಿ ಟೈ ಮಂಗಳೂರು ಕಾರ್ಯಪ್ರವೃತ್ತವಾಗಿದೆ. ಹೊಸ ಉದ್ಯಮ ಸೃಷ್ಟಿಗೆ ಮುಂದಾಗುವವರಿಗೆ ಸರಕಾರದಿಂದ ಪ್ರೋತ್ಸಾಹಧನ ಕೊಡಿಸುವಲ್ಲಿಯೂ ಟೈ ಮಂಗಳೂರು ಸಹಕರಿಸುತ್ತಿದೆ ಎಂದವರು ಹೇಳಿದರು.
ಡೆಲಾಯ್ಟ್ ಸಂಸ್ಥೆಯ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ಸಂಸದ ಕ್ಯಾ. ಬ್ರಿಜೇಶ್ ಚೌಟ ಇಲೆಕ್ಟ್ರಾನಿಕ್ಸ್ ಮತ್ತು ಐಚಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುದೀಪ್ ಶ್ರೀವಾಸ್ತವ, ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನದಾಸ್ ಪೈ ಕೆಡಿಇಎಂನ ಅಧ್ಯಕ್ಷ ಬಿ.ವಿ. ನಾಯ್ಡು 1 ಬ್ರಿಡ್ಜ್ ಸಂಸ್ಥೆಯ ಸಂಸ್ಥಾಪಕ ಮದನ್ ಪದಕಿ ಮೊದಲಾದವರಿದ್ದರು.
ಹೆರಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.