ಜ.18 ರಂದು ‘ಲಯ ಲಾವಣ್ಯ’ ಸಂಗೀತೋತ್ಸವ
ಮಂಗಳೂರು: ಸಂಗೀತ ಭಾರತೀ ಪ್ರತಿಷ್ಠಾನದ ಆಶ್ರಯದಲ್ಲಿ ಜ.18ರಂದು ಸಂಜೆ ಫೆ.6 ರಿಂದ ‘ಲಯ ಲಾವಣ್ಯ’ ಎಂಬ ಭಾರತೀಯ ತಾಳವಾದ್ಯಗಳ ವಿಶೇಷ ಕಾರ್ಯಕ್ರಮ ನಗರದ ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರ್ದೇಶನವನ್ನು ಮೃದಂಗ ವಿದ್ವಾಂಸ ಆನೂರು ಅನಂತಕೃಷ್ಣ ಶರ್ಮಾ ವಹಿಸಿಕೊಂಡಿದ್ದಾರೆ. ಅವರು ಮೃದಂಗ, ಉಡುಕ್ಕೆ, ದಮ್ಮಡಿ ಹಾಗೂ ಕರಟ ವಾದ್ಯಗಳ ಮೂಲಕ ಕಾರ್ಯಕ್ರಮಕ್ಕೆ ಲಯಾತ್ಮಕ ನೇತೃತ್ವ ನೀಡಲಿದ್ದಾರೆ ಎಂದು ಪ್ರತಿಷ್ಠಾನದ ಟ್ರಸ್ಟಿ ಅಂಕುಶ್ ಎನ್. ನಾಯಕ್ ಇಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಲಯ ಲಾವಣ್ಯ’ ತಂಡವು ಶ್ರುತಿಯ ಸೂಕ್ಷ್ಮತೆ, ಶಾಸ್ತ್ರೀಯ ತಾಳಗಳ ಗಂಭೀರತೆ ಮತ್ತು ವೈವಿಧ್ಯಮಯ ಸಂಗೀತ ಶೈಲಿಗಳ ಸುಂದರ ಸಂಯೋಜನೆಯ ಮೂಲಕ ಶ್ರೋತೃಗಳನ್ನು ಸಂಗೀತಾನಂದದ ಲೋಕಕ್ಕೆ ಕರೆದೊಯ್ಯಲಿದೆ.
ಭಾರತೀಯ ಶಾಸ್ತ್ರೀಯ ಸಂಗೀತದ ತಾಳ-ಲಯ ಪರಂಪರೆಯನ್ನು ನವೀನ ಸಂವೇದನೆಯೊಂದಿಗೆ ಪ್ರಸ್ತುತಪಡಿಸುವ ವಿಶಿಷ ಸಂಗೀತ ಸಂಜೆಯಾಗಿದೆ.
ಶ್ರುತಿಯನ್ನು ಮಿತ್ರನಾಗಿ ಅಲಂಕರಿಸಿಕೊಂಡು ಉತ್ಕೃಷ್ಟ ಲಯದಲ್ಲಿ ಅರಳುವ ತಾಳ ಪ್ರದರ್ಶನ ಇದಾಗಿದ್ದು, ಕರ್ನಾಟಕ ಶಾಸ್ತ್ರೀಯ, ಹಿಂದುಸ್ಥಾನಿ, ಜಾಜ್ ಹಾಗೂ ಪಾಶ್ಚಾತ್ಯ ಸಂಗೀತ ಶೈಲಿಗಳ ಸಮನ್ವಯವಾಗಿದೆ. ಮೃದಂಗ, ಖಂಜಿರಿ, ಮೊಚಿಂಗ್, ಡೋಲು, ತಬ್ಲಾ ಸೇರಿದಂತೆ ವಿವಿಧ ಪರ್ಕಶನ್ ವಾದ್ಯಗಳ ಶಕ್ತಿ-ಸುಂದರ ಸಂಗೀತ ಸಂಭ್ರಮ ಇದಾಗಿದೆ.
ಕೊಳಲಿನಲ್ಲಿ ವಿದ್ವಾನ್ ರಾಜಕಮಲ್, ವಯೋಲಿನ್‌ನಲ್ಲಿ ವಿದ್ವಾನ್ ಕೆ.ಜೆ. ದಿಲೀಪ್, ಖಂಜಿರಿ ಮತ್ತು ಫ್ರೇಮ್ ಡ್ರಮ್‌ನಲ್ಲಿ ಸುನಾದ್ ಆನೂರು, ಮೃದಂಗ, ಮದ್ದಳೆ ಹಾಗೂ ಶ್ರೀಖೋಲ್‌ನಲ್ಲಿ ನಾಗೇಂದ್ರ ಪ್ರಸಾದ್, ಫಟಂನಲ್ಲಿ ಫಣೀಂದ್ರ, ಮೊಚಿಂಗ್‌ನಲ್ಲಿ ಚಿದಾನಂದ, ಡ್ರಮ್‌ನಲ್ಲಿ ಗೋಪಿ ಶ್ರವಣ್, ಬೇಸ್ ಟೇಪ್, ಚಂಡೆ ಮತ್ತು ಕಹೋನ್‌ನಲ್ಲಿ ಸುಮಧುರ ಆನೂರು, ಪಖಾವಜ್ ಮತ್ತು ಡೋಲಕ್‌ನಲ್ಲಿ ಆನೂರು ಪ್ರಬೋಧ ಶ್ಯಾಮ್, ತಬ್ಲಾದಲ್ಲಿ ಸುದತ್ತ, ತಬ್ಲಾ, ತಮಟೆ ಹಾಗೂ ವಿವಿಧ ಪರ್ಕಶನ್ ವಾದ್ಯಗಳಲ್ಲಿ ಆನೂರು ವಿನೋದ್ ಶ್ಯಾಮ್ ಸಹಕರಿಸಲಿದ್ದಾರೆ.
ಸಂಗೀತಾಸಕ್ತರಿಗೆ ಪ್ರವೇಶ ಉಚಿತ.
ಖಜಾಂಚಿ ಕರುಣಾಕರ ಬಳ್ಕೂರು, ಟ್ರಸ್ಟಿಗಳಾದ ಮುರುಳೀಧರ್ ಜಿ ಶೈಣೈ, ಡಾ.ರಮೇಶ್ ಕೆ. ಜಿ. ಉಪಸ್ಥಿತರಿದ್ಧರು.