ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ


ಮಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹೆಸರು ಹಾಗೂ ಸ್ವರೂಪವನ್ನು ಮೊದಲಿನಂತೆಯೆ ಮುಂದುವರಿಸಬೇಕು ಎಂದು ಒತ್ತಾಯಿಸಿ ನಗರದ ಪುರಭವನ ಸಮೀಪದ ರಾಜಾಜಿ ಪಾರ್ಕ್‌ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.


ದ. ಕ. ಜಿಲ್ಲಾ ಕಾಂಗ್ರೆಸ್  ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ’ನರೇಗಾ ಯೋಜನೆಯ ಹೆಸರು ಬದಲಿಸುವ ಮೂಲಕ ಕೇಂದ್ರದ ಎನ್ ಡಿಎ ನೇತೃತ್ವದ ಸರ್ಕಾರವು ಮಹಾತ್ಮ ಗಾಂಧಿ ಅವರನ್ನು ಎರಡನೇ ಬಾರಿಗೆ ಕೊಲೆ ಮಾಡಿದೆ. ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಲಾಗಿದ್ದು, ಎಲ್ಲ ರಾಜ್ಯಗಳಿಗೆ ಇದರಿಂದ ಆರ್ಥಿಕ ಹೊರೆ ಹೆಚ್ಚಾಗಲಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿ ಹಾಗೂ ಹಿಂದೆ ಯುಪಿಎ ನೇತೃತ್ವದ ಸರ್ಕಾರ ರಚಿಸಿದ್ದ ನರೇಗಾ ಕಾಯ್ದೆಯ ಮೂಲ ಸ್ವರೂಪ ಉಳಿಸಬೇಕು ಎಂದು ಆಗ್ರಹಿಸಿ, ಫೆಬ್ರುವರಿ 9 ರಿಂದ 12ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಿಂದ ಮೂಲ್ಕಿವರೆಗೆ 100 ಕಿ.ಮೀ ಪಾದಯಾತ್ರೆ ನಡೆಸಿ, ಜನಜಾಗೃತಿ ಮೂಡಿಸಲಾಗುವುದು ಎಂದರು. 


ಕಾಂಗ್ರೆಸ್ ಮುಖಂಡ ರಮಾನಾಥ ರೈ ಮಾತನಾಡಿ, ’ಯುಪಿಎ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಆಹಾರ ಸುರಕ್ಷಾ ಕಾಯ್ದೆ, ಉದ್ಯೋಗ ಖಾತ್ರಿ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಯಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ಈ ದೇಶಕ್ಕೆ ನೀಡಿದೆ. ಕಾಂಗ್ರೆಸ್ ನಿಂದ ಯಾವತ್ತೂ ಈ ದೇಶದ ಬಡವರು, ಪರಿಶಿಷ್ಟರು, ಅಲ್ಪಸಂಖ್ಯಾತರು ಯಾರಿಗೂ ತೊಂದರೆಯಾಗಿಲ್ಲ. ತೊಂದರೆ ಆಗಿದ್ದರೆ ಭೂ ಮಾಲೀಕರು, ಬಂಡವಾಳಶಾಹಿಗಳಿಗೆ ಆಗಿರಬಹುದು. ಕಾಂಗ್ರೆಸ್ ಜನಪರ ಧೋರಣೆಯಿಂದ ಕೆಲಸ ಮಾಡುತ್ತದೆ’ ಎಂದರು. 

ಉಡುಪಿಯಲ್ಲಿ ಇತ್ತೀಚೆಗೆ ನಡೆದ ಶ್ರೀಕೃಷ್ಣ ಮಠದ ಪರ್ಯಾಯದ ವೇಳೆ ಅಲ್ಲಿನ ಜಿಲ್ಲಾಧಿಕಾರಿ ಕೇಸರಿ ಧ್ವಜ ಹಾರಿಸಿದ್ದು ಸರಿಯಲ್ಲ. ದೇವಾಲಯದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಪತಾಕೆ ಹಾರಿಸಿರುವುದನ್ನು ಧಿಕ್ಕರಿಸಬೇಕು ಎಂದರು. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, 18 ಕೋಟಿ ಜನರಿಗೆ ಉದ್ಯೋಗ ನೀಡಿದ್ದ ನರೇಗಾ ಯೋಜನೆಯ ನಿಯಮಾವಳಿ ಬದಲಾಯಿಸಿರುವ ಕೇಂದ್ರ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದೆ. ನರೇಗಾ ಯೋಜನೆ ಜೊತೆಗೆ ಇರುವ ಮಹಾತ್ಮ ಗಾಂಧಿ ಹೆಸರನ್ನು ಸಹಿಸಲು ಆಗದೆ, ವಿಬಿ ಜಿ ರಾಮ್ ಜಿ ಎಂದು ಬದಲಿಸಿ, ರಾಮನ ಹೆಸರನ್ನು ತಂದು ಭಾವನಾತ್ಮಕತೆ ಸೃಷ್ಟಿಸುವ ದುರುದ್ದೇಶ ತೋರಿದೆ ಎಂದರು. 

ಕಾಂಗ್ರೆಸ್ ಮುಖಂಡರಾದ ಜೆ.ಆರ್. ಲೋಬೊ, ಶಾಲೆಟ್ ಪಿಂಟೊ, ಪದ್ಮರಾಜ ಪೂಜಾರಿ, ಅಪ್ಪಿ, ವಿಶ್ವಾಸ್ ಕುಮಾರ್ ದಾಸ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article