ದ್ವಿಭಾಷಾ ನೀತಿ ಶಾಲೆಗಳಲ್ಲಿ ತುಳು ಕಲಿಕೆಗೆ ಅಡ್ಡಿಯಾಗದು: ತಾರಾನಾಥ ಗಟ್ಟಿ ಕಾಪಿಕಾಡ್

ದ್ವಿಭಾಷಾ ನೀತಿ ಶಾಲೆಗಳಲ್ಲಿ ತುಳು ಕಲಿಕೆಗೆ ಅಡ್ಡಿಯಾಗದು: ತಾರಾನಾಥ ಗಟ್ಟಿ ಕಾಪಿಕಾಡ್


ಮಂಗಳೂರು: ದ್ವಿಭಾಷಾ ನೀತಿ ಶಾಲೆಗಳಲ್ಲಿ ತುಳು ಕಲಿಕೆಗೆ ಅಡ್ಡಿಯಾಗದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ. 

ಉರ್ವಸ್ಟೋರ್ ತುಳುಭವನದಲ್ಲಿ ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ತುಳು ಶಿಕ್ಷಕರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.

ದ್ವಿಭಾಷಾ ನೀತಿ ಮಾತೃಭಾಷೆಯನ್ನು ಕಲಿಸುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಾಗಾಗಿ ತುಳು ಕಲಿಕೆಗೆ ತೊಂದರೆಯಾಗದು. ವಿದ್ಯಾರ್ಥಿಗಳಿಗೆ ತುಳು ಭಾಷೆ,  ಸಂಸ್ಕೃತಿಗೆ ಸಂಬಂಧಿಸಿದ ಸ್ಪರ್ಧೆ, ಚಟುವಟಿಕೆಗಳನ್ನು ನಡೆಸುವುದಕ್ಕೆ ಅಕಾಡೆಮಿ ಪ್ರೋತ್ಸಾಹ ನೀಡಲಿದೆ ಎಂದು ಅವರು ಹೇಳಿದರು.

ನಿರಂತರ ಪ್ರೋತ್ಸಾಹಧನಕ್ಕೆ ಕ್ರಮ:

ಶಿಕ್ಷಕರು ತುಳು ಭಾಷೆಯ ಮೇಲಿನ ಪ್ರೀತಿಯಿಂದ ತುಳು ಕಲಿಸುತ್ತಿದ್ದಾರೆ. ಭಾಷೆ ಶಿಕ್ಷಣ ವ್ಯವಸ್ಥೆಯೊಳಗೆ ಬಂದರೆ ಅದು ಉಳಿಯುತ್ತದೆ. ಈ ಹಿಂದೆ ಕೆಲವು ಬಾರಿ ಶಿಕ್ಷಕರಿಗೆ ಪ್ರೋತ್ಸಾಹ ಧನ ನೀಡುವಾಗ ವಿಳಂಬವಾಗಿದೆ. ಮುಂದೆ ಅದನ್ನು ಕ್ಲಪ್ತ ಸಮಯದಲ್ಲಿ ನೀಡುವ ಬಗ್ಗೆ ವ್ಯವಸ್ಥೆಯಾಗಬೇಕಿದೆ. ಅಕಾಡೆಮಿಯಲ್ಲಿ ಮೂಲಧನ  ಇದ್ದರೆ ಕ್ಲಪ್ತ ಸಮಯದಲ್ಲಿಯೇ ಪ್ರೋತ್ಸಾಹಧನ ನೀಡಬಹುದು. ಸಂಘ ಸಂಸ್ಥೆಗಳಿಂದ ದೇಣಿಗೆ ಪಡೆದು ಅದನ್ನು ಅಕಾಡೆಮಿ ಮೂಲಕ ನೀಡುವ ಚಿಂತನೆ ಇದ್ದು  ಶಿಕ್ಷಕರು ಮತ್ತು ಸಂಬಂಧ ಪಟ್ಟ ಇತರರೊಂದಿಗೆ ಸಮಾಲೋಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದರಿಂದ ತುಳು ಕಲಿಕೆ ಯಾವುದೇ ಅಡೆತಡೆ ಇಲ್ಲದೆ  ನಿರಂತರವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ. ಶಿಕ್ಷಕರು ತೋರಿಸುವ ಆಸಕ್ತಿಗೆ ಪೂರಕವಾಗಿ ಅಕಾಡೆಮಿ ಬೆಂಬಲವಾಗಿ ನಿಲ್ಲಲಿದೆ ಎಂದು ತಾರಾನಾಥ ಗಟ್ಟಿ ಭರವಸೆ ನೀಡಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಉರ್ವ ಪೊಂಪೈ ಪ್ರೌಢಶಾಲೆಯ ನಿವೃತ್ತ ಸಹ ಪ್ರಾಧ್ಯಾಪಕ, ತುಳು ಭಾಷಾ ಶಿಕ್ಷಕ ದಿನೇಶ್ ಆರ್. ಶೆಟ್ಟಿಗಾರ್, 2010 ರಲ್ಲಿ  ತುಳು ತರಗತಿಯನ್ನು ಆರಂಭಿಸಿದ್ದೆ. ಶಾಲಾಡಳಿತ ಮಂಡಳಿಗಳ ಸಹಕಾರ, ಪ್ರೋತ್ಸಾಹವಿದ್ದರೆ ತುಳು ಶಿಕ್ಷಕರ ಕೆಲಸ ಸಲೀಸಾಗುತ್ತದೆ. ತುಳು ಉಳಿಯಲು ತುಳು ಶಿಕ್ಷಕರ  ಪಾತ್ರ ದೊಡ್ಡದು ಎಂದು ಹೇಳಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ತುಳು ಸಾಹಿತ್ಯ ಅಕಾಡೆಮಿಯ ನಿವೃತ್ತ ರಿಜಿಸ್ಟ್ರಾರ್ ಚಂದ್ರಹಾಸ ರೈ ಮಾತನಾಡಿ, ತುಳು ಕಲಿಯುವ ಮಕ್ಕಳು, ಕಲಿಸುವ ಸಾಮರ್ಥ್ಯದ  ಶಿಕ್ಷಕರು ನಮ್ಮಲ್ಲಿ ಇದ್ದಾರೆ ಎಂಬುದನ್ನು ಸರ್ಕಾರಕ್ಕೆ ಈ ಹಿಂದೆಯೇ ತೋರಿಸಿಕೊಟ್ಟಿದ್ದೇವೆ. ತುಳು ಕಲಿಕೆಗೆ ಸಂಬಂಧಿಸಿದಂತೆ ಈಗ ಇರುವ ವ್ಯವಸ್ಥೆಯನ್ನು  ಗಟ್ಟಿಗೊಳಿಸಬೇಕು. ಜೊತೆಗೆ ಸರ್ಕಾರದ ಮಟ್ಟದಲ್ಲಿಯೂ ಕೆಲಸಗಳು ಆಗಬೇಕು. ಈಗ ಇರುವ ತುಳು ಶಿಕ್ಷಕರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಿಸಿ ಅವರಿಗೆ ಸವಲತ್ತು  ದೊರೆಯುವಂತೆ ಮಾಡಬೇಕು. ಈ ಕುರಿತು ಅಕಾಡೆಮಿ ಸರ್ಕಾರಕ್ಕೆ ಒತ್ತಡ ಹಾಕಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾಲಯದ ನಿವೃತ್ತ ಸಹಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಮಾತನಾಡಿ, ತುಳು ಭಾಷೆಯ  ಪ್ರಾದೇಶಿಕವಾರು ಸಮಸ್ಯೆ, ಲಿಪಿಯ ಬಗ್ಗೆ ಗೊಂದಲ ಇದ್ದರೂ ಉತ್ತಮ ರೀತಿಯಲ್ಲಿ ಕಲಿಕೆ ನಡೆಯುತ್ತಿದೆ. ಎಐ ಸಹಿತ ಡಿಜಿಟಲ್ ವೇದಿಕೆಗಳಲ್ಲಿಯೂ ತುಳುವಿಗೆ  ಸಂಬಂಧಿಸಿದ ಸಾಕಷ್ಟು ವಿಷಯಗಳು ಪಠ್ಯ ರೂಪದಲ್ಲಿ ಲಭ್ಯವಿದ್ದು ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅಕಾಡೆಮಿ ಸದಸ್ಯರಾದ ಬಾಬು ಕೊರಗ ಪಾಂಗಾಳ, ಬೂಬ ಪೂಜಾರಿ ಮಳಲಿ ಇದ್ದರು. ಸದಸ್ಯೆ ಅಕ್ಷಯ ಆರ್. ಶೆಟ್ಟಿ ಗೋಷ್ಠಿ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article