ಅಧಿವೇಶನದಲ್ಲಿ ಕಾಮಗಾರಿಗೆ ಅನುದಾನ ಸೇರಿದಂತೆ ಹಲವು ವಿಷಯಗಳ ಕುರಿತು ಧ್ವನಿ ಎತ್ತಿದ ಶಾಸಕ ಕಾಮತ್
ಸದನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಹೊಸ ನಿಯಮ ಬಂದರೂ ಮಂಗಳೂರಿನಲ್ಲೇ ಮೊದಲು ಪ್ರಾಯೋಗಿಕವಾಗಿ ಜಾರಿಗೆ ತರಲು ನೋಡುತ್ತಾರೆ. ಈ ಹಿಂದೆ ನಗರದಲ್ಲಿ ಜಿಪಿಎಸ್ ಆಧಾರದಲ್ಲಿ ಇ-ಖಾತಾ ಆರಂಭಿಸಲಾಗಿದ್ದು ಲೊಕೇಶನ್ ಸೆರೆಹಿಡಿದು ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿತ್ತು. ಈ ಸರ್ಕಾರ ಯಾವಾಗ ಹೊಸ ತಂತ್ರಾಂಶವನ್ನು ಜಾರಿಗೊಳಿಸಿತೋ ಅಂದಿನಿಂದ ಎಲ್ಲವೂ ಅಸ್ತವ್ಯಸ್ತಗೊಂಡು ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಳೆದ ಎರಡು ತಿಂಗಳಿನಲ್ಲಿ ಆಗಿರುವ ಇ-ಖಾತಾಗಳ ಸಂಖ್ಯೆ ನೋಡಿದರೆ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ ಸಚಿವರು ಮಾತ್ರ, ಸರ್ವರ್ ಉನ್ನತೀಕರಿಸಲಾಗಿದ್ದು ಯಾವುದೇ ಸಮಸ್ಯೆಯಿಲ್ಲವೆಂದು ಉತ್ತರಿಸಿರುವುದು ದುರಂತವೆಂದರು.
ಅಲ್ಲದೇ ನಗರದಲ್ಲಿ ಪಿಪಿಪಿ ಮಾಡಲ್ ನಲ್ಲಿ ಅಳವಡಿಸಲಾಗಿರುವ ಬೀದಿ ದೀಪಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಹಳೆಯ ದೀಪಗಳು ದುರಸ್ತಿಯಾಗುತ್ತಿಲ್ಲ, ಹೊಸ ದೀಪಗಳು ಅಳವಡಿಸುತ್ತಿಲ್ಲ. ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ಬಳಿ ಒಳಚರಂಡಿ ಕಾಮಗಾರಿ ಅಸ್ತವ್ಯಸ್ತಗೊಂಡಿರುವ ಬಗ್ಗೆ ಸ್ಥಳೀಯ ಮಹಿಳೆಯರು ದೂರು ನೀಡುತ್ತಿದ್ದಾರೆ. ಅದು ಸಚಿವರ ಸಹಿತ ಸ್ಪೀಕರ್ ಅವರ ಗಮನಕ್ಕೂ ಬಂದಿದೆ. ನಗರದ ಪ್ರಮುಖ ಭಾಗದಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ಜಲಸಿರಿಯ ಕಾಮಗಾರಿಗೆ ವೇಗ ಸಿಗುತ್ತಿಲ್ಲ ಇಂತಹ ಮೊದಲಾದ ಸಮಸ್ಯೆಗಳ ಬಗ್ಗೆ ಕೂಡಲೇ ಸರ್ಕಾರ ಗಮನ ಹರಿಸಬೇಕು ಎಂದರು.