ಕರಾವಳಿ ಉದ್ಯಮಗಳಿಗೆ ಇಂಗ್ಲಂಡ್‌ನಲ್ಲಿ ಹೊಸ ಅವಕಾಶ ಸೃಷ್ಟಿ: ಚಂದ್ರು ಅಯ್ಯರ್
ಮಂಗಳೂರಿನಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಗುರುವಾರ ಸಂಜೆ ಮಾತನಾಡಿದ ಅವರು, ಒಪ್ಪಂದ ಭಾಗವಾಗಿ ಎರಡೂ ದೇಶಗಳ ನಡುವೆ ವಾಣಿಜ್ಯ ಹಾಗೂ ವ್ಯಾ ಪಾರದಲ್ಲಿ ಸಾಕಷ್ಟು ಪ್ರಗತಿ ನಿರೀಕ್ಷಿಸಬಹುದು ಎಂದರು.
ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆ, ಅಡಿಕೆ, ಗೋಡಂಬಿಯಂತಹ ಸಾಂಪ್ರದಾಯಿಕ ಕ್ಷೇತ್ರಗಳಿವೆ, ಹಾಂಗ್ಯೊ, ಐಡಿಯಲ್ ನಂತಹ ಐಸ್ ಕ್ರೀಂ ಕಂಪನಿಗಳಿವೆ, ಫಿ ನ್‌ಟೆಕ್, ಐಟಿಯಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರಗಳಿವೆ, ಇವುಗಳೆಲ್ಲದಕ್ಕೂ ಇಂಗ್ಲಂಡ್‌ನಲ್ಲಿ ಅವಕಾಶ ಸಿಗಬಹುದಾಗಿದೆ ಎಂದರು.
ಶಿಕ್ಷಣ/ಪ್ರವಾಸೋದ್ಯಮ ಅವಕಾಶ:
ಈ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಂಡ್‌ನ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ವಿದ್ಯಾರ್ಥಿ ವೀಸಾ ಕಲ್ಪಿಸಲಾಗುತ್ತಿದೆ, ಕಳೆದೆರಡು ವರ್ಷಗಳಿಂದ ಯುವ ವೃತ್ತಿಪರರಿಗೆ 3000 ವೀಸಾಗಳನ್ನು ಒದಗಿಲಾಗುತ್ತಿದ್ದು ಬಹಳ ಬೇಡಿಕೆ ಪಡೆದಿದೆ, ಆದರೆ ಅಷ್ಟರ ಮಟ್ಟಿಗೆ ಬ್ರಿಟಿಷ್ ಯುವ ವೃತ್ತಿಪರರಿಂದ ಸ್ಪಂದನೆ ಇಲ್ಲ, ಆದರೆ ಮುಂದೆ ಅಲ್ಲಿನ ವಿದ್ಯಾರ್ಥಿ ವೃಂದದ ನಡುವೆಯೂ ಕರಾವಳಿ ಭಾಗದ ಎನ್‌ಐಟಿಕೆ ಸುರತ್ಕಲ್, ನಿಟ್ಟೆ, ಸಹ್ಯಾದ್ರಿಯಂತಹ ಗುಣಮಟ್ಟದ ಶಿಕ್ಷಣ, ಆವಿಷ್ಕಾರಕ್ಕೆ ಉತ್ತೇಜನ ನೀಡುವ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು ಎಂದರು.
ಸೀಟಾ ಒಪ್ಪಂದಕ್ಕೆ ಭಾರತದ ಸಂಸತ್ತಿನ ಅನುಮೋದನೆ ಈಗಾಗಲೇ ಸಿಕ್ಕಿದೆ, ಮುಂದೆ ಇಂಗ್ಲಂಡ್‌ನ ಸಂಸತ್ತು ಅಂತಿಮ ಅನುಮೋದನೆ ನೀಡಿದ ಬಳಿಕ ಉಭಯ ರಾಷ್ಟ್ರಗಳ ವ್ಯಾಪಾರೋದ್ಯಮ ಅವಕಾಶಗಳು ಇನ್ನಷ್ಟು ಪ್ರಗತಿ ಕಾಣಲಿವೆ. ಒಪ್ಪಂದಕ್ಕೆ ಮೊದಲು ಉಭಯ ದೇಶಗಳ ನಡುವಿನ ವ್ಯಾಪಾರ 44 ಬಿಲಿಯನ್ ಡಾಲರ್ ಇದ್ದುದು ಬಳಿಕ 47ಕ್ಕೇರಿಕೆ ಕಂಡಿದೆ, ಎಐ, ಸೆಮಿಕಂಡಕ್ಟರ್ಸ್, ಕ್ರಿಟಿಕಲ್ ಮಿನರಲ್ಸ್, ಕ್ವಾಂಟಂ ಫಿಸಿಕ್ಸ್, ಬಯೋಟೆಕ್ನಾಲಜಿ, ಫ್ಯೂಚರ್ ಟೆಲಿಕಾಂ ಕ್ಷೇತ್ರಗಳಲ್ಲಿ ಮುಖ್ಯವಾಗಿ ಸಹಭಾಗಿತ್ವಕ್ಕೆ ಈ ವಾಣಿಜ್ಯ ಒಪ್ಪಂದ ವೇದಿಕೆಯಾಗಲಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಇಂಗ್ಲಂಡ್ ನ ಶೈಕ್ಷಣಿಕ ಸಂಸ್ಥೆಗಳಿಗೆ ಭಾರತದಲ್ಲಿ ಅವಕಾಶ ಸಿಕ್ಕಿದೆ, ಅದರ ಭಾಗವಾಗಿ ಸೌದಾಂಪ್ಟನ್ ವಿವಿಯ ಕ್ಯಾಂಪಸ್ ದಿಲ್ಲಿಯಲ್ಲಿ ಬಂದಿದೆ. ಬೆಂಗಳೂರಿನಲ್ಲಿ ಲಿವರ್ ಪೂಲ್ ವಿವಿ ಕ್ಯಾಂಪಸ್ ಆರಂಭಗೊಂಡಿದ್ದು, ಮುಂದೆ ಲ್ಯಾಂಕೆಸ್ಟರ್ ವಿವಿ ಕ್ಯಾಂಪಸ್ ಕೂಡಾ ಬರಲಿದೆ ಎಂದರು.
ಕರಾವಳಿಯ ಪ್ರವಾಸೋದ್ಯಮವನ್ನು ಬ್ರಿಟಿಷರಿಗೆ ಪರಿಚಯಿಸುವ ಕೆಲಸ ಮಾಡಲಾಗುವುದು, ಇಲ್ಲಿಯ ಕಡಲ ತೀರಗಳು, ಸೀಫುಡ್, ಇಲ್ಲಿನ ವಾತಾವರಣವನ್ನು ಆನಂದಿಸುವ ಅವಕಾಶ ಅವರಿಗೆ ಸಿಗಬೇಕಿದೆ ಎಂದೂ ಅಯ್ಯರ್ ತಿಳಿಸಿದರು.
ಬಿಯಾಂಡ್ ಬೆಂಗಳೂರು ಅವಕಾಶ:
ಈಗಾಗಲೇ ರೋಲ್ಸ್ ರಾಯ್, ಆರ್ಮ್ ಹೋಲ್ಡಿಂಗ್ಸ್, ನಾಟ್ ವೆಸ್ಟ್ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ. ಮುಂದೆ ಬಿಯಾಂಡ್ ಬೆಂಗಳೂರು ಯೋಜ ನೆಯಡಿಯಲ್ಲಿ ಮಂಗಳೂರಿನಲ್ಲೂ ಇಂತಹ ಸಂಸ್ಥೆಗಳ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಆರಂಭಿಸುವ ಬಗ್ಗೆಯೂ ಮಾತುಕತೆ ನಡೆಸಲಾಗುವುದು ಎಂದರು.
ಉಭಯ ದೇಶಗಳ ನಡುವೆ ಒಪ್ಪಂದವು 6 ಲಕ್ಷ ಉದ್ಯೋಗಗಳಿಗೆ ಬೆಂಬಲ ನೀಡಲಿದೆ. ಯುಕೆಭಾರತ ವಾಣಿಜ್ಯ ಒಪ್ಪಂದದಿಂದ ಶೇ.99ರಷ್ಟು ಯುಕೆ ತೆರಿಗೆ ಮತ್ತು ಶೇ 90ರಷ್ಟು ಭಾರತದ ತೆರಿಗೆಗಳನ್ನು ಸಡಿಲಗೊಳಿಸಲಾಗುವುದು, ಈ ಮೂಲಕ ಉಭಯ ದೇಶಗಳ ನಡುವೆ ರಫ್ತು ಹೆಚ್ಚಳಗೊಳ್ಳಲಿದೆ.