ರೈತಾಪಿವರ್ಗದ ಕ್ರೀಡೆ ‘ಕೋಳಿಅಂಕ’ ನಿರ್ಬಂಧ ಸಲ್ಲದು: ಫೆ.1 ರಂದು ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ
ಪುತ್ತೂರು: ತುಳುನಾಡಿನ ವೀರಕ್ರೀಡೆಯಾಗಿರುವ ಕಂಬಳದಂತೆ ರೈತಾಪಿವರ್ಗದ ಮತ್ತೊಂದು ಮನೋರಂಜನಾ ಕ್ರೀಡೆಯಾಗಿರುವ ಕೋಳಿಅಂಕಕ್ಕೆ ಜೂಜುಮಸ್ತಿ ಎಂಬ ಹಣೆಪಟ್ಟಿ ಕಟ್ಟಿಪ್ರಸ್ತುತ ನಿರ್ಬಂಧ ಹೇರಲಾಗಿದೆ. ಧಾರ್ಮಿಕ ಹಿನ್ನಲೆಯಿಂದ ನಡೆಸಲಾಗುವ ಜೂಜುರಹಿತ ಕೋಳಿಅಂಕಕ್ಕೆ ಅವಕಾಶ ನೀಡುವಂತೆ ಶಾಸಕರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಫೆ.೧ರಂದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ರಚನೆಯ ಸಮಾಲೋಚನಾ ಸಭೆ ಕೊಟೇಚಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಸಂಚಾಲಕ ಬೆಳಿಯಪ್ಪ ಗೌಡ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಅವರು ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪ್ರಾಚೀನ ಸಂಪ್ರದಾಯದಂತೆ ನೇಮೋತ್ಸವದ ಸಂದರ್ಭಗಳಲ್ಲಿ ಈ ಸಾಂಪ್ರದಾಯಿಕ ಕೋಳಿಅಂಕವನ್ನು ನಡೆಸಲಾಗುತ್ತಿತ್ತು. ನೇಮೋತ್ಸವದ ಸಂದರ್ಭ ಗೊನೆಮುಹೂರ್ತದ ನಂತರ ‘ಕೋಳಿಗೂಟ’ ನೆಡುವ ಆಚರಣೆ ನಡೆಯುತ್ತಿದೆ. ಕೆಲ ಕಡೆಗಳಲ್ಲಿ ನೇಮೋತ್ಸದ ಮುಂಚಿತವಾಗಿ ಕೋಳಿಅಂಕ ನಡೆಸಲಾಗುತ್ತಿದ್ದರೆ, ಇನ್ನು ಕೆಲ ಭಾಗಗಳಲ್ಲಿ ನೇಮೋತ್ಸವದ ಬಳಿಕ ಕೋಳಿ ಅಂಕ ನಡೆಸಲಾಗುತ್ತದೆ.
ಆದರೆ ಇದೀಗ ದಕ ಜಿಲ್ಲೆಯಲ್ಲಿ ಕೋಳಿಅಂಕ ನಡೆಸಲು ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಧಾರ್ಮಿಕ ತಾಣಗಳಲ್ಲಿಯೂ ಜೂಜುರಹಿತ ಕೋಳಿಅಂಕಕ್ಕೆ ನಿರ್ಬಂದ ಹೇರುವ ಕೆಲಸ ಮಾಡಲಾಗಿದೆ. ಧಾರ್ಮಿಕ ಹಿನ್ನಲೆಯಲ್ಲಿ ಕೋಳಿಅಂಕದ ಮೂಲಕ ಗಣಗಳಿಗೆ ರಕ್ತತರ್ಪಣ ನೀಡುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿ ಆಚರಣೆ , ತೆಂಗಿನಕಾಯಿ ಕುಟ್ಟುವುದು ಸೇರಿದಂತೆ ದಕ ಜಿಲ್ಲೆಯ ಸಾಂಪ್ರದಾಯಿಕ ಆಚರಣೆಯಾದ ಕೋಳಿಅಂಕ ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಧಾರ್ಮಿಕ ಪರಂಪರೆಯ ಕೋಳಿಅಂಕಕ್ಕೆ ನಿಷೇಧ ಹೇರುವ ಮೂಲಕ ನಾಡಿನ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಕೆಲಸ ನಡೆಸಲಾಗಿದೆ. ಈ ಹಿಂದೆ ಕಂಬಳ ಕ್ಷೇತ್ರಕ್ಕೂ ಈ ಸಮಸ್ಯೆ ಉಂಟಾಗಿತ್ತು. ಆದರೆ ಈ ವಿಚಾರದಲ್ಲಿ ನ್ಯಾಯಾಲಯದ ಮೂಲಕ ಹೋರಾಟ ನಡೆಸಿ ಇದೀಗ ಕಂಬಳ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.
ಜೂಜುರಹಿತ ಕೋಳಿಅಂಕವನ್ನು ಧಾರ್ಮಿಕ ಹಿನ್ನಲೆಯಲ್ಲಿಯೇ ಪರಿಗಣಿಸಿ ಮತ್ತೆ ಅವಕಾಶ ನೀಡುವಂತೆ ಒತ್ತಾಯಿಸಲು ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ ನಡೆಸಲಾಗುತ್ತಿದೆ. ಈ ಸಮಾಲೋಚನಾ ಸಭೆ ಬಳಿಕ ನಿಯೋಗದ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರನ್ನು ಶಾಸಕರ ನೇತೃತ್ವದಲ್ಲಿ ಭೇಟಿ ಮಾಡಿ ಅವರಿಗೆ ಮನವಿ ನೀಡುವ ಕೆಲಸ ಮಾಡಲಾಗುವುದು. ತುಳುನಾಡಿನ ಯಾವುದೇ ಸಾಂಪ್ರದಾಯಿಕ ಆಚರಣೆಗಳಿಗೆ ಸಮಸ್ಯೆಯಾಗದಂತೆ ಅವರನ್ನು ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.
ಮಾಜಿ ಜಿಪಂ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ವಿವೇಕ್ ರೈ, ಚಂದ್ರಹಾಸ ಕೇಪು, ಶಿವಪ್ರಸಾದ್ ಪಡೀಲು ಉಪಸ್ಥಿತರಿದ್ದರು.