ಕೂಟ ಮಹಾಜಗತ್ತು: ಲೋಕ ಹಿತಕ್ಕಾಗಿ ಗುರುನರಸಿಂಹ ಹೋಮ

ಕೂಟ ಮಹಾಜಗತ್ತು: ಲೋಕ ಹಿತಕ್ಕಾಗಿ ಗುರುನರಸಿಂಹ ಹೋಮ


ಮಂಗಳೂರು: ಕೂಟ ಮಹಾಜಗತ್ತು ಮಂಗಳೂರು ಅಂಗ ಸಂಸ್ಥೆಯ ಆಶ್ರಯದಲ್ಲಿ, ಸಮಸ್ತ ಲೋಕದ ಹಿತ ಮತ್ತು ಕಲ್ಯಾಣ ಎಂಬ ಉನ್ನತ ಆದರ್ಶವನ್ನು ಹೃದಯಂಗಮ ಮಾಡಿಕೊಂಡು, ಇತ್ತೀಚೆಗೆ ನಗರದ ಪಾಂಡೇಶ್ವರದಲ್ಲಿರುವ ಗುರುನರಸಿಂಹ ಸಭಾಭವನದಲ್ಲಿ ಗುರುನರಸಿಂಹ ಹೋಮವು ನರಸಿಂಹ ಜಪ ಸಹಿತ ಅಪಾರ ಭಕ್ತಿಭಾವ, ಶ್ರದ್ಧಾಸಕ್ತಿ ಹಾಗೂ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. 

ಆಧ್ಯಾತ್ಮಿಕ ಶುದ್ಧತೆ, ಧಾರ್ಮಿಕ ಚೇತನ ಮತ್ತು ಸಾಮಾಜಿಕ ಏಕತೆಯನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಹೋಮವು ಭಾಗವಹಿಸಿದ ಎಲ್ಲರ ಮನಸ್ಸುಗಳಲ್ಲಿ ದೈವಿಕ ಸ್ಪಂದನವನ್ನು ಮೂಡಿಸಿತು.

ಕೂಟ ಮಹಾಜಗತ್ತು ಕೇಂದ್ರದ ಅಧ್ಯಕ್ಷ ಸತೀಶ್ ಹಂದೆ ಅವರು, “ಇಂದಿನ ಸಮಾಜದಲ್ಲಿ ಧರ್ಮಜಾಗೃತಿಯನ್ನು ಪುನರುಜ್ಜೀವನಗೊಳಿಸುವ ಅಗತ್ಯ ಹೆಚ್ಚಾಗಿದೆ. ಧರ್ಮವು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಶಕ್ತಿ ಹೊಂದಿದ್ದು, ಇಂತಹ ಹೋಮಗಳು ಸಮಾಜದಲ್ಲಿ ಏಕತೆ, ಸಹಬಾಳ್ವೆ ಹಾಗೂ ಸಂಘಟನಾ ಶಕ್ತಿಯನ್ನು ಗಟ್ಟಿಗೊಳಿಸುವ ಮಹತ್ವದ ಸಾಧನಗಳಾಗಿವೆ. ಮಂಗಳೂರು ಅಂಗ ಸಂಸ್ಥೆಯು ಈ ನಿಟ್ಟಿನಲ್ಲಿ ಮಾದರಿಯಾಗುವಂತಹ ಕಾರ್ಯವನ್ನು ಕೈಗೊಂಡಿದ್ದು, ಇತರ ಅಂಗ ಸಂಸ್ಥೆಗಳೂ ಇದರಿಂದ ಪ್ರೇರಣೆ ಪಡೆದು ಇಂತಹ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಘಟಕದ ಅಧ್ಯಕ್ಷ ಶ್ರೀಧರ ಹೊಳ್ಳ, ಕೂಟ ಸಮಾಜದ ಇತಿಹಾಸದ ಪಯಣದಲ್ಲಿ ಇದುವರೆಗೆ ಕಾಣದಿರುವಂತಹ ಹೊಸ ಅಧ್ಯಾಯವನ್ನು ಬರೆಯುವ ದೃಢ ಸಂಕಲ್ಪದೊಂದಿಗೆ, ಮಂಗಳೂರು ಘಟಕದ ನೇತೃತ್ವದಲ್ಲಿ ಮೊದಲ ಬಾರಿಗೆ ಕೇಂದ್ರ ಅಧಿವೇಶನವನ್ನು ಆಯೋಜಿಸುವ ಮಹತ್ವಾಕಾಂಕ್ಷೆಯ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದರು. 

ಆಧ್ಯಾತ್ಮಿಕ ಸಂದೇಶ ನೀಡಿದ ಶಿವರಾಮ ಕಾರಂತ್, ದೈವಿಕ ಗುರಿಯನ್ನು ಸಾಧಿಸುವ ದಾರಿಯಲ್ಲಿ ಮನಸ್ಸು ಮತ್ತು ಆತ್ಮವನ್ನು ಏಕಾಗ್ರಗೊಳಿಸುವ ಸಾಧನಾ ಪಥವೇ ಸಂಕಲ್ಪ. ದೃಢನಿಶ್ಚಯ ಮತ್ತು ಶ್ರದ್ಧೆಯಿಂದ ಕೈಗೊಳ್ಳುವ ಈ ಆಧ್ಯಾತ್ಮಿಕ ಕ್ರಮ ಮಾನವನ ಬದುಕಿಗೆ ಶಾಂತಿ, ಸ್ಥಿರತೆ ಹಾಗೂ ಗುರಿ ಸಾಧನೆಯ ಶಕ್ತಿಯನ್ನು ನೀಡುತ್ತದೆ. ಇಂತಹ ಹೋಮಗಳು ವ್ಯಕ್ತಿಯ ಒಳಗಿನ ಆತ್ಮಬಲವನ್ನು ಜಾಗೃತಗೊಳಿಸುತ್ತವೆ” ಎಂದು ವಿವರಿಸಿದರು.

ಚಂದ್ರ ಐತಾಳ್ (ಮಂಗಳಾದೇವಿ), ವರ್ಕಾಡಿ ಸುಬ್ರಹ್ಮಣ್ಯ ಮಯ್ಯ, ಕಾರುಣ್ಯ ಭಟ್ (ಇಡ್ಯಾ), ಕುತ್ತಾರು ರಾಘವೇಂದ್ರ ಹೊಳ್ಳ, ಗಣೇಶ ಸೋಮಯಾಜಿ, ರವಿ ಹೊಳ್ಳ ಹಾಗೂ ಸುಬ್ರಹ್ಮಣ್ಯ ಕಾರಂತ್ ಅವರ ನೇತೃತ್ವದಲ್ಲಿ ಅನುಭವೀ ಋತ್ವಿಜರಿಂದ ಗುರುನರಸಿಂಹ ಹೋಮದ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ, ಶುದ್ಧಾಚಾರ ಹಾಗೂ ಮಂತ್ರೋಚ್ಚಾರಣೆಯೊಂದಿಗೆ ನೆರವೇರಿದವು.

ಉಪಾಧ್ಯಕ್ಷರಾದ ಪಿ. ಸದಾಶಿವ ಐತಾಳ್, ಬಿ. ಚಂದ್ರಶೇಖರ ಐತಾಳ್, ಬಿಲಿಯನ್ ಫೌಂಡೇಶನ್ ಅಧ್ಯಕ್ಷ ಗೋಪಾಲಕೃಷ್ಣ ಹೇರ್ಳೆ, ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ, ಕಾರ್ಯದರ್ಶಿ ಜಿ.ಕೆ. ಮಯ್ಯ, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಉಪಾಧ್ಯಕ್ಷ ಪ್ರಭಾಕರ ಐತಾಳ್, ಸದಸ್ಯರಾದ ಚಂದ್ರಮೋಹನ್, ರಂಗನಾಥ ಐತಾಳ್, ಬಾಲಕೃಷ್ಣ ಐತಾಳ್, ಗಣೇಶ ಎಮ್ಮೆಕೆರೆ, ಪ್ರಸನ್ನ ಇರುವೈಲು, ವಿವೇಕ್, ವ್ಯವಸ್ಥಾಪಕ ಶಿವರಾಮ ರಾವ್ ಸೇರಿದಂತೆ ಮಹಿಳಾ ಪ್ರತಿನಿಧಿಗಳಾದ ಪ್ರಭಾ ರಾವ್, ಲಲಿತಾ ಉಪಾಧ್ಯಾಯ, ಗೌರಿ ಹೊಳ್ಳ, ಪಂಕಜ ಹಾಗೂ ವಿವಿಧ  ಅಂಗ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಭವ್ಯತೆ ಹಾಗೂ ಅರ್ಥಪೂರ್ಣತೆಯನ್ನು ಹೆಚ್ಚಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article