ಡಾ.ಕಲ್ಲಡ್ಕ ಪ್ರಭಾಕರ ಭಟ್‌ಗೆ ಮತ್ತೊಂದು ಸಂಕಷ್ಟ: ಧ್ವೇಷಭಾಷಣ-ಮಾನವಬಂಧುತ್ವ ವೇದಿಕೆ ದೂರು
ಜ.12ರಂದು ವಿವೇಕಾನಂದ ಕಾಲೇಜಿನಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮತ್ತೊಮ್ಮೆ ಧ್ವೇಷ ಭಾಷಣ ಮಾಡಿದ್ದಾರೆ. ಪೋಷಕರು ಹಾಗೂ ಹದಿಹರೆಯದ ಬಾಲಕ-ಬಾಲಕಿಯರಿದ್ದ ಈ ಕಾರ್ಯಕ್ರಮದಲ್ಲಿ ನಾಗರಿಕ ಸಮುದಾಯಗಳ ನಡುವೆ ಪರಸ್ಪರ ಧ್ವೇಷ ಉಂಟಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಾಂಗಕ್ಕೆ ನಿಂದನೆ ಮಾಡಿದ್ದಾರೆ. ಕಪೋಲಕಲ್ಪಿತ ಕಥೆ ಹೇಳಿ ಹಿಂದೂಗಳನ್ನು ಕ್ರಿಶ್ಚಿಯನ್ನರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಆ ಮೂಲಕ ಸಮಾಜದಲ್ಲಿ ಧ್ವೇಷ ಮತ್ತು ಹಿಂಸೆಯನ್ನು ಪ್ರೇರೇಪಿಸುವ ಕೆಲಸ ಮಾಡಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಬಂಧುತ್ವ ವೇದಿಕೆಯ ತಾಲೂಕು ಸಮಿತಿ ಆಗ್ರಹಿಸಿದೆ.
ಯೂಟ್ಯೂಬ್ ಚಾನೆಲ್ ವಿರುದ್ಧ ದೂರು:
ಈ ಧ್ವೇಷ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ಮೇಲೆಯೂ ಸೂಕ್ತಕ್ರಮ ಕೈಗೊಳ್ಳಬೇಕು. ಎಳೆಯ ಮಕ್ಕಳು ಹಾಗೂ ಸಾರ್ವಜನಿಕರು ಈ ಚಾನೆಲ್ ನ್ನು ನೋಡಿದ್ದಾರೆ. ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಇಂತಹ ಮಾತುಗಳನ್ನು ಚಾನೆಲ್ ಪ್ರಸಾರ ಮಾಡಿದೆ. ಹಾಗಾಗಿ ಈ ಚಾನೆಲ್ ವಿರುದ್ಧ ಕಾನೂನುಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಬಂಧುತ್ವ ವೇದಿಕೆಯ ತಾಲೂಕು ಸಮಿತಿ ಅಧ್ಯಕ್ಷ ಅಮಳ ರಾಮಚಂದ್ರ ಕೆ ಅವರು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಈ ಸಂದರ್ಭ ಬಂಧುತ್ವ ವೇದಿಕೆಯ ಮುಖಂಡರಾದ ಎಂ.ಬಿ ವಿಶ್ವನಾಥ ರೈ, ಮೌರೀಸ್ ಮಸ್ಕರೇನಸ್, ಎಚ್.ಮಹಮ್ಮದ್ ಆಲಿ, ಡಾ.ರಾಜಾರಾಮ್ ಕೆ.ಬಿ, ಕೆನ್ಯೂಟ್ ಮಸ್ಕರೇನಸ್, ಬೋಲೋಡಿ ಚಂದ್ರಹಾಸ ರೈ, ಶಶಿಕಿರಣ್ ರೈ, ಅಬ್ದುಲ್ ರಹಿಮಾನ್ ಯೂನಿಕ್, ಉಲ್ಲಾಸ್ ಕೋಟ್ಯಾನ್ ಹಾಗೂ ಪ್ರಕಾಶ ಗೌಡ ತೆಂಕಿಲ ಉಪಸ್ಥಿತರಿದ್ದರು.