ಜ.24 ರಂದು ಪಡುಮಲೆಯಲ್ಲಿ ‘ವಿಶೇಷ ಪೂಜೆ-ದೀಪೋತ್ಸವ’
ಪುತ್ತೂರು: ಮಾನವತ್ವದಿಂದ ದೇವತ್ವಕ್ಕೇರಿದ ಕಾರಣಿಕ ಪುರುಷರಾದ ಕೋಟಿ ಚೆನ್ನಯ ಹಾಗೂ ದೇಯಿಬೈದೆತಿಯ ಜನ್ಮಸ್ಥಳ ಪಡುಮಲೆಯಲ್ಲಿ ಜ.24ರಂದು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಟ್ರಸ್ಟ್ ಆಶ್ರಯದಲ್ಲಿ ವಿಶೇಷ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪಡಮಲೆಯ ಈ ಕಾರಣಿಕ ಕ್ಷೇತ್ರದಲ್ಲಿ 2021ರಲ್ಲಿ ಬ್ರಹ್ಮಕಲಶೋತ್ಸವದ ಅದ್ದೂರಿಗೆ ಕೊರೊನಾ ತಡೆ ಒಡ್ಡಿತ್ತು. ಆ ಬಳಿಕ ಮೊದಲ ಬಾರಿಗೆ ಇಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜ.24ರಂದು ಸಂಜೆ 6.30ಕ್ಕೆ ವಿಶೇಷ ಪೂಜೆ ಮತ್ತು ದೀಪೋತ್ಸವ ನಡೆಯಲಿದೆ. ಭಕ್ತಾಧಿಗಳೇ ಬಂದು ಇಲ್ಲಿ ದೀಪ ಬೆಳಗಿಸುವ ಸೇವೆ ಮಾಡಲಿದ್ದಾರೆ. ಸಂಜೆ 7.30ಕ್ಕೆ ಧಾರ್ಮಿಕ ಕಾರ್ಯಕ್ರಮ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾರ್ಯವರ್ಯ ಸ್ವಾಮೀಜಿ ಹಾಗೂ ಸಂತೋಷ್ ಗುರೂಜಿ ಆಶೀರ್ವಚನ ನೀಡಲಿದ್ದಾರೆ.
ಮಾನವಹಕ್ಕು ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್, ಸಂಸದ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಎಂಎಲ್‌ಸಿ ಕಿಶೋರ್ ಬೊಟ್ಯಾಡಿ, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕುದ್ರೋಳಿಯ ಕೃತೀನ್ ಅಮೀನ್, ಮಾಜಿ ಮೇಯರ್ ಕವಿತಾ ಸನಿಲ್, ವಿಜಯವಿಕ್ರಮ ರಾಮಕುಂಜ, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ ಪುಷ್ಪಗಿರಿ, ನಿವೃತ್ತ ಜಂಟಿ ನಿರ್ದೇಶಕ ಸುಂದರ ಪೂಜಾರಿ ಹಾಗೂ ಉದ್ಯಮಿ ಸುಧಾಕರ ಶೆಟ್ಟಿ ಪಡುಮಲೆ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.
ಕೋಟಿ-ಚೆನ್ನಯ ದೇಯಿ ಬೈದೆತಿ ಜನ್ಮಸ್ಥಳ:
ದಕ್ಷಿಣಭಾರತದ ಪ್ರಸಿದ್ಧ ೩ನೇ ಕಾರಣಿಕ ಕ್ಷೇತ್ರವಾಗಿರುವ ಪಡುಮಲೆ ಕೋಟಿ ಚೆನ್ನಯ ಹಾಗೂ ದೇಯಿ ಬೈದೆತಿಯ ಜನ್ಮಸ್ಥಳ ಹಾಗೂ ಮೂಲಸ್ಥಾನ. ಇಲ್ಲಿ ಪ್ರತೀ ತಿಂಗಳ ಸಂಕ್ರಮಣದಂದು ವಿಶೇಷ ಪೂಜಾ ಕಾರ್ಯ ನಡೆಯುತ್ತಿದೆ. ವಾರ್ಷಿಕವಾಗಿ ಜನವರಿ ೪ನೇ ಶನಿವಾರ ದೀಪೋತ್ಸವ ನಡೆಸಲಾಗುತ್ತಿದೆ.
ಈ ಕ್ಷೇತ್ರ ಯಾವುದೇ ಜಾತಿ, ಧರ್ಮ ಹಾಗೂ ಸಮುದಾಯಕ್ಕೆ ಸೀಮಿತವಲ್ಲ. ಪಂಚವರ್ಣದ ಮಣ್ಣಿನ ತುಳುನಾಡಿನ ಪುಣ್ಯಪ್ರಧಾಯಕ ಕ್ಷೇತ್ರವಾಗಿರುವ ಈ ಪಡುಮಲೆ ವಿದೇಶಿಯರ ಸಂಶೋದನೆ, ಸಾಹಿತ್ಯ ಗ್ರಂಥಗಳು, ಚರಿತ್ರೆಯ ದಾಖಲೆಗಳು, ಸರ್ಕಾರ ಬಿಡುಗಡೆಗೊಳಿಸಿರುವ ಐತಿಹಾಸಿಕ ಕ್ಷೇತ್ರ ಗ್ರಂಥಗಳು ಹಾಗೂ ಪಡುಮಲೆಯಲ್ಲಿನ ಐತಿಹ್ಯಗಳು ಕೋಟಿ ಚೆನ್ನಯ ದೇಯಿ ಬೈದೆತಿಯ ಜೀವನ ಚರಿತ್ರೆಗೆ ಸಾಕ್ಷಿಯಾಗಿವೆ. ಹಾಗಾಗಿ ಪಡುಮಲೆ ಈ ಕಾರಣಿಕ ಶಕ್ತಿಗಳ ಮೂಲಸ್ಥಾನ ಎಂಬುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ವಿಜಯಕುಮಾರ್ ಸೊರಕೆ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಪಟ್ಲ, ಟ್ರಸ್ಟಿಗಳಾದ ಶೇಖರ್ ನಾರಾವಿ ಮತ್ತು ರತನ್ ನಾಕ್ ಕರ್ನೂರು ಉಪಸ್ಥಿತರಿದ್ದರು.