ವಾಹನ ಕಳವು ವಿಮೆ ಕ್ಲೇಮು ನಿರಾಕರಣೆ: ವಾಹನದ ಮೌಲ್ಯ, ದಂಡ ಮತ್ತು ಬಡ್ಡಿ ಸೇರಿಸಿ ಪರಿಹಾರ ನೀಡಲು ಆದೇಶ

ವಾಹನ ಕಳವು ವಿಮೆ ಕ್ಲೇಮು ನಿರಾಕರಣೆ: ವಾಹನದ ಮೌಲ್ಯ, ದಂಡ ಮತ್ತು ಬಡ್ಡಿ ಸೇರಿಸಿ ಪರಿಹಾರ ನೀಡಲು ಆದೇಶ

ಮಂಗಳೂರು: ವಾಹನದ ಕಳವು ಸಂದರ್ಭದಲ್ಲಿ ವಾಹನಕ್ಕೆ ಸೂಕ್ತ ವಿಮೆ ಇದ್ದರೂ ಸಕಾರಣವಿಲ್ಲದೆ ವಿಮಾ ಮೊತ್ತ ನಿರಾಕರಿಸಿದ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪೆನಿ ವಿರುದ್ಧ ದ.ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯವು ಚಾಟಿ ಬೀಸಿದ್ದು, ವಾಹನದ ಮೌಲ್ಯವೂ ಸೇರಿದಂತೆ 20,000 ರೂ. ದಂಡ, 10,000 ರೂ. ಕೋರ್ಟ್ ಖರ್ಚು ಮತ್ತು ಇದಕ್ಕೆ ಬಡ್ಡಿ ಪಾವತಿಸುವಂತೆ ಆದೇಶಿಸಿದೆ.

ಮಂಗಳೂರಿನ ಸಾಂತಪ್ಪ ಯು. ಎಂಬವರು ಗೂಡ್ಸ್ ಟೆಂಪೋ ವಾಹನ ಸಂಖ್ಯೆ KA 19AD 3058 ರ ಮಾಲಿಕರಾಗಿದ್ದು, 26/12/2023 ರಂದು ಸಂಜೆ ಕೆಲಸ ಮುಗಿಸಿ ಪಡೀಲ್ ಎಂಬಲ್ಲಿ ಈ ವಾಹನ ನಿಲುಗಡೆಗೊಳಿಸಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ವಾಹನ ಕಳವಾಗಿದ್ದು, ಅದಕ್ಕಾಗಿ ತೀವ್ರ ಹುಡುಕಾಟ ಮತ್ತು ಪೋಲಿಸರಿಗೆ ದೂರು ಕೊಟ್ಟಿದ್ದರೂ ಸಹ ವಾಹನ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಸದ್ರಿ ವಾಹನದ ವಿಮಾ ಕಂಪೆನಿಗೆ ವಾಹನದ ವಿಮೆಯ ಮೊತ್ತವನ್ನು ಪಾವತಿಸುವಂತೆ ಎಲ್ಲಾ ದಾಖಲೆಗಳೊಂದಿಗೆ ಕ್ಲೇಮ್ ಸಲ್ಲಿಸಿದ್ದರೂ ವಿಮಾ ಕಂಪೆನಿಯವರು ನಿಲ್ಲಿಸಿದ ವಾಹನಕ್ಕೆ ಫಿಟ್ನೆಸ್ಸ್ ಇಲ್ಲ ಎಂಬ ಅನಗತ್ಯ ಕಾರಣವೊಡ್ಡಿ ಕ್ಲೇಮನ್ನು ನಿರಾಕರಿಸಿರುತ್ತಾರೆ.

ಇದರ ವಿರುದ್ಧ ಸಲ್ಲಿಸಿದ ದೂರನ್ನು ಕೂಲಂಕುಶವಾಗಿ ಪರಿಶೀಲಿಸಿದ ದ.ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯವು ಕಳವಿನ ಸಂದರ್ಭದಲ್ಲಿ ವಾಹನವನ್ನು ದೈನಂದಿನ ಚಟುವಟಿಕೆಯ ನಂತರ ನಿಲುಗಡೆ ಮಾಡಿದ್ದು, ಅದು ಚಾಲನೆಯ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಆಗ ಫಿಟ್ನೆಸ್ಸ್ ಸರ್ಟಿಫಿಕೇಟ್ ಅಪ್ರಸ್ತುತ ಮತ್ತು ಕಳವಿಗೂ ಕ್ಲೇಮ್ ನಿರಾಕರಣೆಗೆ ನೀಡಿರುವ ಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ವಿಮಾ ಕಂಪೆನಿಯವರಿಂದ ಸದ್ರಿ ವಾಹನ ಮಾಲಿಕರಿಗೆ ಸೇವಾ ನ್ಯೂನತೆ ಆಗಿರುತ್ತದೆ. ಈ ಕಾರಣಕ್ಕಾಗಿ ಸದ್ರಿ ವಾಹನದ ಮೌಲ್ಯದ ಜೊತೆಗೆ 20,000 ರೂ. ದಂಡ, 10,000 ರೂ. ಕೋರ್ಟ್ ಖರ್ಚು ಮತ್ತು ಬಡ್ಡಿ ಶೇ.6 ರಂತೆ ಪಾವತಿಸುವಂತೆ ಕೋರ್ಟ್ ವಿಮಾ ಕಂಪೆನಿಗೆ ಆದೇಶಿಸಿದೆ.

ನ್ಯಾಯವಾದಿ ಅನಿಲ್ ಕುಮಾರ್ ಕೆ. ಇವರು ಗ್ರಾಹಕರ ಪರವಾಗಿ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article