ಮಾನವೀಯ ಸೇವೆಗೆ ವಿವೇಕಾನಂದರ ಸಂದೇಶ ಸ್ಫೂರ್ತಿ: ಸಿಎ ಶಾಂತಾರಾಮ ಶೆಟ್ಟಿ
ಮಂಗಳೂರು: ವಿದ್ಯಾರ್ಥಿಗಳು ಮೋಜಿನ ಆಕರ್ಷಣೆಗಳಿಂದ ವಿಚಲಿತರಾಗದೆ ಭವಿಷ್ಯದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲೇ ಸೇವೆಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಯುವಜನತೆ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸ್ವಾಮಿ ವಿವೇಕಾನಂದರ ಸಂದೇಶ ಸ್ಫೂರ್ತಿಯಾಗಿದೆ ಎಂದು ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಮತ್ತು ಯೂತ್ ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ 164ನೇ ಜಯಂತಿ ಅಂಗವಾಗಿ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ರಹ್ಮಣ್ಯ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಯುವ ಸಾಧಕರಾದ ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿ ಧನಲಕ್ಷ್ಮಿಪೂಜಾರಿ, ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ವಿಶ್ವ ದಾಖಲೆಯ ವಿದುಷಿ ದೀಕ್ಷಾ ಎಸ್. ಮತ್ತು ರಾಷ್ಟಪತಿ ರೋವರ್ಸ್ ಅವಾರ್ಡ್ ವಿಜೇತ ಪ್ರೀತೇಶ್ ಅವರುಗಳನ್ನು ಸನ್ಮಾನಿಸಲಾಯಿತು.
ಮಂಗಳೂರು ವಿ.ವಿ., ಯೇನೆಪೊಯಾ ಪರಿಗಣಿತ ವಿ.ವಿ. ಹಾಗೂ ನಿಟ್ಟೆ ಪರಿಗಣಿತ ವಿ.ವಿ.ಯ ಯೂತ್ ರೆಡ್‌ಕ್ರಾಸ್ ಪ್ರಶಸ್ತಿಗಳನ್ನು ವಿತರಿಸಲಾಯಿತು.
ರೆಡ್‌ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಡಾ. ಸತೀಶ್ ರಾವ್, ನಿರ್ದೇಶಕರಾದ ಪುಷ್ಪರಾಜ್ ಜೈನ್, ಗುರುದತ್ ಕಾಮತ್, ಪಿ.ಬಿ. ಹರೀಶ್ ರೈ, ಮಂಗಳೂರು ವಿ.ವಿ. ಯುವ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಅಮೀನ್, ಯೇನೆಪೊಯಾ ವಿ.ವಿ. ನೋಡಲ್ ಅಧಿಕಾರಿ ನಿತ್ಯಶ್ರೀ ಬಿ.ವಿ., ನಿಟ್ಟೆ ವಿ.ವಿ.ಯ ಡಾ. ಶಂತನು ಸಹಾ ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ವಂದಿಸಿದರು. ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.