ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ: ಡಿ.ಕೆ. ಶಿವಕುಮಾರ್
ಮಂಗಳೂರು: ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪ್ರವಾಸೋದ್ಯಮ ನೀತಿಯ ಜೊತೆಗೆ ಕರಾವಳಿಗೆ ಪ್ರತ್ಯೇಕ ನೀತಿಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.
300 ಕಿ.ಮೀ ವ್ಯಾಪ್ತಿ ಹೊಂದಿರುವ ರಾಜ್ಯದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಇದಕ್ಕಾಗಿ ಸೂಕ್ತ ಟೂರಿಸಂ ಪಾಲಿಸಿಯ ಅಗತ್ಯವಿದೆ. ಪ್ರಸಕ್ತ ಟೂರಿಸಂ ಪಾಲಿಸಿ ಕರಾವಳಿಗೆ ಪೂರಕವಾಗಿಲ್ಲ ಎಂಬುದನ್ನು ಪ್ರವಾಸೋದ್ಯಮ ಸಚಿವರ ಗಮನಕ್ಕೂ ತಂದಿದ್ದೇನೆ. ಕೇಂದ್ರ ಸರ್ಕಾರವೂ ಈ ಭಾಗದ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿಸಬೇಕು. ವಿದೇಶಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಅನೇಕ ಉದ್ಯಮಿಗಳು ತಮ್ಮ ಹುಟ್ಟೂರಿನ ಅಭಿವೃದ್ಧಿಗೆ ಹೂಡಿಕೆ ಮಾಡಲು ಸಿದ್ಧರಿದ್ದಾರೆ ಎಂದರು.
ಕರಾವಳಿಯ ಯುವಕರಲ್ಲಿ ಸಾಮರ್ಥ್ಯ ಇದೆ. ಅವರು ವಿದೇಶಗಳಲ್ಲಿ ತಮ್ಮ ನೈಪುಣ್ಯತೆ ತೋರಿಸುತ್ತಿದ್ದಾರೆ. ತಮ್ಮ ಜನ್ಮಭೂಮಿಗೆ ಕೊಡುಗೆ ನೀಡಬೇಕೆಂಬ ಮನಸ್ಸು ಅವರಲ್ಲಿ ಇದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅಪಾರ ಪ್ರಕೃತಿ ಸಂಪತ್ತು ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಹಿಂದುಳಿದಿದ್ದೇವೆ. ಕೇರಳ ಮತ್ತು ಗೋವಾ ತಮ್ಮ ಕರಾವಳಿ ಸಂಪತ್ತನ್ನು ಪ್ರವಾಸೋದ್ಯಮದ ಮೂಲಕ ಯಶಸ್ವಿಯಾಗಿ ಸದುಪಯೋಗಪಡಿಸಿಕೊಂಡಿದೆ ಎಂದವರು ಹೇಳಿದರು.