ಮತಿ ಇದ್ದಂತೆ ಸ್ಥಿತಿ-ಗತಿ! ರತ್ನತ್ರಯ ಧರ್ಮ ಧಾರಣೆಯೇ ಜೀವ ಮತ್ತು ಜೀವನಕ್ಕೆ ಅಲಂಕಾರ: ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಅವರು ಶನಿವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥಕ್ಷೇತ್ರದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿದ್ದು, ಇತ್ತೀಚೆಗೆ ನಿಧನರಾದ ಪ್ರೊ. ಎಸ್. ಪ್ರಭಾಕರ್ ಸ್ಮರಣಾರ್ಥ ಅವರ ಮಗಳು ಶರ್ಮಿಳಾನರೇಂದ್ರ ಶಾಸ್ತ್ರದಾನಕ್ಕಾಗಿ ಪ್ರಕಟಿಸಿದ, ಮುನಿರಾಜ ರೆಂಜಾಳ ಸಂಗ್ರಹಿಸಿ, ನಿರೂಪಣೆ ಮಾಡಿದ ‘ಧರ್ಮಪ್ರಭಾ’ ಕೃತಿಯನ್ನು ಬಿಡುಗಡೆಗೊಳಿಸಿ, ಮಂಗಲ ಪ್ರವಚನ ನೀಡಿದರು.
ಹಿರಿಯ ವಿದ್ವಾಂಸರಾಗಿ, ಶಿಕ್ಷಣತಜ್ಞರಾಗಿ, ದಕ್ಷಆಡಳಿತದಾರರಾಗಿ, ಶಿಸ್ತಿನಸಿಪಾಯಿಯಾಗಿ, ಶ್ರಾವಕರ ಷಟ್ಕರ್ಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ, ಸ್ವಾಧ್ಯಾಯ, ಜಪ-ತಪ, ಸಂಯಮಗಳ ಪಾಲನೆಯೊಂದಿಗೆ ಅವರು ಆದರ್ಶ ಶ್ರಾವಕರಾಗಿ ಮೆರೆದಿರುವರು.
ಮೂಡಬಿದ್ರೆಯಲ್ಲಿ ಸಾವಿರ ಕಂಬದ ಬಸದಿಯಲ್ಲಿ ವಾರ್ಷಿಕ ರಥೋತ್ಸವ ಸಂದರ್ಭ ಒಂದು ದಿನದ ಸೇವೆಯನ್ನು ಅವರು ಶ್ರದ್ಧಾ-ಭಕ್ತಿಯಿಂದ ಮಾಡುತ್ತಿದ್ದರು ಎಂದು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು.
ಮೃತರ ಸದ್ಗತಿ ಪ್ರಾಪ್ತಿಗಾಗಿ ಒಂಭತ್ತು ಬಾರಿ ಸಾಮೂಹಿಕವಾಗಿ ಪಂಚನಮಸ್ಕಾರ ಮಂತ್ರ ಪಠಣ ಮಾಡಲಾಯಿತು. ಬಸದಿಯಲ್ಲಿ ಭಗವಾನ್ ಶ್ರೀ ಶಾಂತಿನಾಥಸ್ವಾಮಿ ಸನ್ನಿಧಿಯಲ್ಲಿ 216 ಕಲಶ ಅಭಿಷೇಕ, ಬ್ರಹ್ಮಯಕ್ಷ ದೇವರಿಗೆ ವಿಶೇಷ ಪೂಜೆ ನಡೆಸಲಾಯಿತು. ‘ಧರ್ಮಪ್ರಭಾ’ ಕೃತಿಯನ್ನು ಎಲ್ಲರಿಗೂ ಶಾಸ್ತ್ರದಾನ ರೂಪದಲ್ಲಿ ವಿತರಿಸಲಾಯಿತು.
ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಡಾ. ನೀತಾರಾಜೇಂದ್ರ ಕುಮಾರ್, ರತ್ನತ್ರಯ ತೀರ್ಥಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಎಸ್.ಡಿ. ಸಂಪತ್‌ಸಾಮ್ರಾಜ್ಯ ಶಿರ್ತಾಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಪ್ರಾಂಶುಪಾಲರುಗಳಾದ ಪ್ರೊ. ರವೀಶ್ ಕುಮಾರ್, ಪ್ರೊ. ದಿನೇಶ್ ಚೌಟ, ಪ್ರೊ. ಬಿ.ಎ. ಕುಮಾರ ಹೆಗ್ಡೆ, ಪ್ರೊ. ಶಾಂತಿಪ್ರಕಾಶ್ ಮೊದಲಾದವರು ಇದ್ದರು.
ಡಾ. ನರೇಂದ್ರ, ಶರ್ಮಿಳಾ ನರೇಂದ್ರ, ಪೂರನ್‌ವರ್ಮ ಮತ್ತು ಕುಟುಂಬಸ್ಥರು ಸ್ವಾಗತಿಸಿ, ಸತ್ಕರಿಸಿದರು.