ಬೆಳೆವಿಮೆ ತಾರತಮ್ಯ ನಿವಾರಣೆಗೆ ಸರ್ಕಾರ ನಿರ್ಧಾರ: ಚೆಲುವರಾಯ ಸ್ವಾಮಿ
ಶನಿವಾರ ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಆರಂಭಗೊಂಡ 3 ದಿನಗಳ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ-ಸಸ್ಯಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆ ವಿಮೆಯ ಸಮಸ್ಯೆ ಬಗ್ಗೆ ಸದನದಲ್ಲಿ ಶಾಸಕ ಅಶೋಕ್ ರೈ ಅವರು ಮಾತನಾಡಿದ್ದಾರೆ. ತೋಟಗಾರಿಕಾ ಸಚಿವರಲ್ಲಿ ನಾನೂ ಚರ್ಚಿಸಿದ್ದೇನೆ. ಈ ಸಮಸ್ಯೆ ಪರಿಹಾರವಾಗಲಿದೆ ಎಂದ ಅವರು ವಿಮಾ ಯೋಜನೆಯಲ್ಲಿ ಪ್ರಸ್ತುತ ರೂ.5 ಸಾವಿರ ಕೋಟಿ ಪಾವತಿ ಮಾಡಲಾಗಿದೆ. ಹಿಂದಿನ ವರ್ಷಗಳಲ್ಲಿ 12 ಲಕ್ಷ ಬೆಳೆ ವಿಮಾ ನೋಂದಣಿ ಇದ್ದರೆ, ಈ ಬಾರಿ 23 ಲಕ್ಷ ದಾಟಿದೆ. ಕೃಷಿ ಇಲಾಖೆಯಿಂದ 31 ಜಿಲ್ಲೆಗಳಿಗೆ ರೂ.2500 ಕೋಟಿ ಸಬ್ಸಿಡಿ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 83 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ ಇದೆ. ಇದರಲ್ಲಿ 24 ಲಕ್ಷ ಹೆಕ್ಟೇರಿನಲ್ಲಿ ಸಮ್ಮಿಶ್ರ ಬೆಳೆ ಇದೆ. ರೈತರು ಯಾಂತ್ರಿಕ ಕೃಷಿ ಹಾಗೂ ಸಮಗ್ರ ಕೃಷಿಗಳಿಗೆ ಆದ್ಯತೆ ನೀಡಬೇಕು. ತಮ್ಮ ಬೆಳೆಗಳನ್ನು ಸಂಸ್ಕರಿಸಿ ಮಾರುಕಟ್ಟೆಗೆ ನೀಡಿದರೆ 5 ಪಟ್ಟು ಹೆಚ್ಚು ಲಾಭಗಳಿಸಬಹುದು. ಈ ಬಗ್ಗೆ ರೈತವರ್ಗ ಚಿಂತನೆ ಮಾಡಬೇಕಾಗಿದೆ. ಸರ್ಕಾರದಿಂದ ಎಸ್‌ಸಿ-ಎಸ್‌ಟಿ ವರ್ಗಕ್ಕೆ ನೀಡಲಾಗುವ ಕೆಲವೊಂದು ಸವಲತ್ತುಗಳಿಗೆ ಶೇ.90 ಸಬ್ಸಿಡಿಯನ್ನು ಇತರ ಸಮುದಾಯಗಳಿಗೂ ವಿಸ್ತರಿಸಲಾಗಿದೆ. ಭತ್ತಕ್ಕೂ ಪ್ರೋತ್ಸಾಹಧನ ನೀಡಲಾಗುವುದು ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಶೋಕ್ ರೈ, ಅಡಕೆ, ರಬ್ಬರ್ ಸೇರಿದಂತೆ 28 ಬೆಳೆಗಳನ್ನು ಕೃಷಿ ಬೆಳೆಗಳೆಂದು ಘೋಷಿಸಲು ಕೇಂದ್ರಕ್ಕೆ ರಾಜ್ಯದಿಂದ ಶಿಫಾರಸು ಮಾಡಲಾಗಿದೆ. ಇದರ ಅನುಷ್ಠಾನದ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಶ್ರಮಿಸಬೇಕೆಂದು ಆಗ್ರಹಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರ್ನಾಟಕ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ವಿಜಯ ಕುಮಾರ ರೈ ಕೋರಂಗ, ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕರ್ನಾಟಕ ಕೃಷಿಕ ಸಮಾಜದ ನಿಕಟಪೂರ್ವ ರಾಜ್ಯಾಧ್ಯಕ್ಷ ಮಂಜುನಾಥ ಗೌಡ ಎಸ್.ಆರ್., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಬೀಜ ಮತ್ತು ಸಾವಯವ ನಿಗಮದ ಅಧ್ಯಕ್ಷೆ ಲಾವಣ್ಯ ಬಳ್ಳಾಲ್, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ ದಕ್ಷಿಣ ಕನ್ನಡ ಇವರ ಸಾರಥ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಸುದ್ದಿ ಅರಿವು ಕೇಂದ್ರ, ರೈತ ಕುಡ್ಲ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಮೇಳ ನಡೆಯುತ್ತಿದೆ.