ಮನರೇಗಾ ಉಳಿಸಲು ಜನವರಿ 26 ನಂತರ ಹೋರಾಟ: ಡಿಸಿಎಂ ಡಿ.ಕೆ. ಶಿವಕುಮಾರ್
ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5-10 ಕಿ.ಮೀ ಪಾದಯಾತ್ರೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ಮನರೇಗಾ ಉಳಿಸಿ ಅಭಿಯಾನವನ್ನು ಇಡೀ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು. ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚೆ ಮಾಡಲು ಎರಡು ದಿನ ವಿಶೇಷ ಅಧಿವೇಶನ ಕರೆಯುವ ಆಲೋಚನೆ ಸಹ ಇದೆ. ಆಮೂಲಕ ಇದರಿಂದ ಗ್ರಾಮೀಣ ಪ್ರದೇಶದ ಮೇಲೆ ಹೇಗೆ ದುಷ್ಪರಿಣಾಮ ಬೀರಲಿದೆ ಎಂದು ಜನರಲ್ಲಿ ಅರಿವು ಮೂಡಿಸಲಾಗುವುದು. ಜ.26ರಿಂದ ಫೆ.2ರವರೆಗೆ ತಾಲ್ಲೂಕು ಮಾಟ್ಟದಲ್ಲಿ ಪಂಚಾಯತಿ ಸದಸ್ಯರನ್ನು, ಫಲಾನುಭವಿ ಕಾರ್ಮಿಕರುಗಳನ್ನು ಒಳಗೊಂಡು ಪಾದಯಾತ್ರೆ ನಡೆಸಲಾಗುವುದು. ನರೇಗಾ ಯೋಜನೆ ಫಲಾನುಭವಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವು ಮೂಡಿಸಲಾಗುವುದು. ಮತ್ತೆ ನರೇಗಾವನ್ನು ಮರುಸ್ಥಾಪಿಸುವ ತನಕ ಹೋರಾಟ ಮಾಡಲಾಗುವುದು ಎಂದು ವಿವರಿಸಿದರು.
ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡುವ ಬಗ್ಗೆ ಕೇಳಿದಾಗ, ‘ಪಕ್ಷ ನನಗೆ ಜವಾಬ್ದಾರಿ ನೀಡಿದ್ದು, ಇದರ ಬಗ್ಗೆ ಪಕ್ಷದ ನಾಯಕರ ಬಳಿ ಚರ್ಚೆ ನಡೆಸುತ್ತೇನೆ ಎಂದರು.
ಎಸ್.ಪಿ ಮತ್ತು ಕಮಿಷನರ್ ವರ್ಗಾವಣೆ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಎನ್ನುವ ಬಿಜೆಪಿಯವರ ಆರೋಪದ ಬಗ್ಗೆ ಕೇಳಿದಾಗ, ‘ದಿನಾ ಆರೋಪ ಮಾಡ್ತಾ ಇರಲಿ, ದಿನಾ ಆರೋಪ ಕೇಳುತ್ತಾ ಇರೋಣ ಎಂದರು.