ಫಲ್ಗುಣಿ ನದಿ ನೀರು ಸಂಪೂರ್ಣ ಮಲಿನ: ಕ್ರಮಕ್ಕೆ ಮುಂದಾಗದ ಮಾಲಿನ್ಯ ನಿಯಂತ್ರಣ ಮಂಡಳಿ
ಮಂಗಳೂರು: ಫಲ್ಗುಣಿ ನದಿ ನೀರು ಸಂಪೂರ್ಣ ಮಲಿನಗೊಂಡಿದ್ದು, ಈಗಾಗಲೇ ಅನೇಕ ಮೀನುಗಳ ಮಾರಣ ಹೋಮ ನಡೆದಿದೆ. ಈ ಕುರಿತು ಜಂಟಿ ಸಮಿತಿ ನೀಡಿದ ವರದಿಯಲ್ಲೂ ಉಲ್ಲೇಖಗೊಂಡಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು, ಅನುಷ್ಠಾನಗೊಳಿಸಲು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗುತ್ತಿಲ್ಲ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ ಆರೋಪಿಸಿದೆ.
ಫಲ್ಗುಣಿ ನದಿ ಮಲಿನದ ಬಗ್ಗೆ ಹೊಸದಿಲ್ಲಿಯ ರಾಷ್ಟ್ರೀಯ ಹಸಿರು ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿತ್ತು. ಇದನ್ನು ಪರಿಶೀಲಿಸಲು ಜಂಟಿ ಸಮಿತಿ ನೇಮಕ ಮಾಡಲಾಗಿತ್ತು. ಇದರಲ್ಲಿ ಕೇಂದ್ರ ಪರಿಸರ ಮಾಲಿನ್ಯ ಮಂಡಳಿ, ರಾಜ್ಯ ಪರಿಸರ ಮಾಲಿನ್ಯ ಮಂಡಳಿ, ಪಾಲಿಕೆ ಆಯುಕ್ತರು, ಎನ್.ಸಿ.ಎಂ.ಎಸ್ ಸೇರಿದಂತೆ ಐದು ಮಂದಿ ಅಧಿಕಾರಿಗಳ ತಂಡ ರಚನೆ ಮಾಡಲಾಯಿತು ಎಂದು ಸಂಘದ ಕಾರ್ಯದರ್ಶಿ ಬೆನೆಡಿಕ್ಟ್ ಫೆರ್ನಾಂಡಿಸ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ತಂಡದಿಂದ ೧18-12-2023ಕ್ಕೆ ಪ್ರಧಾನ ಪೀಠಕ್ಕೆ ವರದಿ ನೀಡಿದ್ದು, ಅದರ ಪ್ರಕಾರ ಫಲ್ಗುಣಿ ನದಿ ಮಾಲಿನ್ಯಗೊಂಡಿದೆ. ಇಲ್ಲಿನ ಕೆಲ ಕೈಗಾರಿಕೆಗಳ ಮಲಿನ ನೀರು ನದಿ ಸೇರುತ್ತಿದೆ ಎಂದು ಉಲ್ಲೇಖ ಮಾಡಲಾಗಿತ್ತು. ಬೈಕಂಪಾಡಿಯ 6 ಕೈಗಾರಿಕೆಯನ್ನು ಗುರುತಿಸಿ, ಅವರಿಗೆ ದಂಡ ವಿಧಿಸಬೇಕು ಎಂದು ಹೇಳಲಾಗಿತ್ತು. ಅದರ ಪ್ರಕಾರ ಮಂಗಳೂರು ಪಾಲಿಕೆ, ಕೆಐಡಿಬಿಗೂ ದಂಡ ವಿಧಿಸಿ ವರದಿ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಎನ್.ಜಿ.ಟಿ.ಯಿಂದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಲಾಗಿತ್ತು. ಆದರೆ, ಕೆಐಡಿಬಿ ಮತ್ತು ಪಾಲಿಕೆಗೆ ದಂಡ ವಿಧಿಸಲು ಮಂಡಳಿ ಮುಂದಾಗಿಲ್ಲ ಎಂದು ಹೇಳಿದರು.
ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘದ ಅಧ್ಯಕ್ಷೆ ಆರತಿ, ಸದಸ್ಯ ಚಾಲ್ಸ್ ಡಿಸೋಜ ಇದ್ದರು.