ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ರದ್ದುಗೊಳಿಸಿದೆ: ಸಚಿವ ದಿನೇಶ್ ಗುಂಡೂರಾವ್
ನಗರದ ನೆಹರೂ ಮೈದಾನದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.
ರಾಜ್ಯಗಳ ವೆಚ್ಚದಲ್ಲಿ ವ್ಯಾಪಕ ಅಧಿಕಾರಗಳನ್ನು ಕೇಂದ್ರಕ್ಕೆ ಹಸ್ತಾಂತರಿಸುವ ಹೊಸ ಯೋಜನೆ ಬಡವರ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಸಂವಿಧಾನಬಾಹಿರವಾಗಿದೆ. ವ್ಯಾಖ್ಯಾನವೇ ಇಲ್ಲದ ‘ವಿಕಸಿತ ಭಾರತ’ ಎಂಬ ಕಲ್ಪನೆಯ ಅಡಿಯಲ್ಲಿ ನಾಗರಿಕರ ಆಯ್ಕೆಯನ್ನು ಮೊಟಕುಗೊಳಿಸಿ ಉದ್ಯೋಗ ಹಕ್ಕನ್ನು ಕೇಂದ್ರ ಸರ್ಕಾರದ ಹಿಡಿತಕ್ಕೆ ಒಪ್ಪಿಸುವ ಈ ಕ್ರಮ ಜನಹಿತಕ್ಕೆ ವಿರುದ್ಧವಾಗಿದೆ.
ವಿಕೇಂದ್ರಿಕರಣದ ಮೂಲ ತತ್ವವನ್ನು ನಿರ್ಲಕ್ಷಿಸಿ, ಕಾರ್ಮಿಕರು, ಪಂಚಾಯತ್‌ಗಳು ಹಾಗೂ ರಾಜ್ಯಗಳ ಅಧಿಕಾರಗಳನ್ನು ಕೇಂದ್ರಕ್ಕೆ ವರ್ಗಾಯಿಸುವ ಈ ಯೋಜನೆಯನ್ನು ರಾಜ್ಯ ಸರ್ಕಾರ ಕಾನೂನುಬದ್ಧವಾಗಿಯೂ ಹಾಗೂ ನೈತಿಕವಾಗಿಯೂ ವಿರೋಧಿಸುತ್ತದೆ ಎಂದು ಸಚಿವರು ಹೇಳಿದರು.
ಯಾವುದೇ ಶಕ್ತಿ ಅಥವಾ ವ್ಯಕ್ತಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಇಲ್ಲಿನ ಯುವಕರನ್ನು ದಾರಿ ತಪ್ಪಿಸಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹಿಸುವುದನ್ನು ಸರ್ಕಾರ ಸಹಿಸುವುದಿಲ್ಲ. ಇಂತಹ ಕೃತ್ಯಗಳು ಕಂಡುಬಂದಲ್ಲಿ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ ಎಂದರು.
ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಗಳ ನೈಜ ಆಶಯಗಳನ್ನು ಪಾಲಿಸುತ್ತಾ, ಇತರ ಧರ್ಮಗಳನ್ನು ಪರಸ್ಪರ ಗೌರವಿಸಿದಲ್ಲಿ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯ ನೆಲೆಸಲಿದೆ. ಶಾಂತಿ ಮತ್ತು ಸಮನ್ವಯತೆ ಸ್ಥಾಪಿತವಾದಲ್ಲಿ ಜಿಲ್ಲೆಯು ಅಭಿವೃದ್ಧಿಗೊಂಡು, ಇಲ್ಲಿನ ಜನರ ಜೀವನಮಟ್ಟವೂ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜನರ ಸಹಕಾರ ಅತ್ಯವಶ್ಯಕವಾಗಿದೆ. ವಿಚ್ಛಿದ್ರಕಾರಿ ಹಾಗೂ ಸಮಾಜವನ್ನು ಒಡೆಯುವ ಶಕ್ತಿಗಳು ಅಭಿವೃದ್ಧಿಗೆ ತೊಡಕಾಗುತ್ತಿವೆ ಎಂಬ ಸತ್ಯವನ್ನು ನಾವು ಅರಿಯಬೇಕಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಪ್ರಯತ್ನದಿಂದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಯಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬಲವಾದ ನೆಲೆ ಸಿದ್ಧಗೊಂಡಿದೆ. ಇದರ ಫಲವಾಗಿ ಇಲ್ಲಿನ ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳು ಅಥವಾ ದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ಹಾಗೂ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಜಿಸಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಮಂಗಳೂರು ಮೀನುಗಾರಿಕಾ ಬಂದರಿನ ಆಧುನೀಕರಣ ಯೋಜನೆಯನ್ನು ಸುಮಾರು 37 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಡಿ 320 ಮೀಟರ್ ಉದ್ದದ ಹೊಸ ಜೆಟ್ಟಿ ನಿರ್ಮಾಣ, ಎಲ್ಲಾ ರೀತಿಯ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿ, ಹರಾಜು ಮಳಿಗೆಗಳ ಪುನರ್ ನಿರ್ಮಾಣ ಹಾಗೂ ಒಳಚರಂಡಿ ವ್ಯವಸ್ಥೆಗಳನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗುವುದು. ಇದರಿಂದ ಮೀನುಗಾರರ ಹಲವು ದಶಕಗಳ ಬೇಡಿಕೆಗಳು ಈಡೇರಲಿವೆ ಎಂದು ಅವರು ಹೇಳಿದರು.
ದಿಲ್ಲಿ ಮೂಲದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಅನನ್ಯ ಶ್ರೀವಾಸ್ತವ ಅವರು ಪರೇಡ್ ದಂಡನಾಯಕಿಯಾಗಿ ಕಾರ್ಯನಿರ್ವಹಿಸಿ, ಕನ್ನಡದಲ್ಲಿ ಪರೇಡ್ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಈ ಬಾರಿ ಕಂಪ್ಯೂಟರ್‌ಗಳ ಬದಲಾಗಿ ತಲಾ 50,000 ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಅದೇ ರೀತಿ, 15 ವರ್ಷಗಳ ಕಾಲ ಕೆಎಸ್‌ಆರ್‌ಟಿಸಿ ಯಲ್ಲಿ ಅಪಘಾತರಹಿತವಾಗಿ ಸೇವೆ ಸಲ್ಲಿಸಿದ ಚಾಲಕರನ್ನು ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್, ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಎಸ್ಪಿ ಅರುಣ್ ಕುಮಾರ್, ಅಪರ ಜಿಲ್ಲಾಧಿಕಾರಿ ರಾಜು, ವಿವಿಧ ನಿಗಮಗಳು ಹಾಗೂ ಅಕಾಡೆಮಿಗಳ ಅಧ್ಯಕ್ಷರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸಾವಿನ ನಂತರ ಅಂಗಾಂಗ ದಾನ ಮಾಡಿದ ಸಿಂಧುಶ್ರೀ ಅವರ ಕುಟುಂಬವನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಬೆಟರ್ಡ್ ರೆಸಲ್, ಯೆನೆಪೋಯ, ಕಾರ್ಮೆಲ್ ಹಾಗೂ ಸೇಂಟ್ ಆಗ್ನೆಸ್ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಭಾರತ್ ಸೇವಾದಳ ಮುಲ್ಲಕಾಡು ಶಾಲೆಯ ತಂಡ ಕವಾಯಿತಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರೆ, ಸ್ಕೌಟ್ಸ್ ಹುಡುಗರ ತಂಡ (ಸರ್ಕಾರಿ ಪ್ರೌಢ ಶಾಲೆ, ಕಿನ್ನಿಕಂಬಳ) ದ್ವಿತೀಯ ಸ್ಥಾನ ಪಡೆದಿದ್ದು, ರೋಲಿಂಗ್ ಶೀಲ್ಡ್ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಮಂಜುಳಾ ಶೆಟ್ಟಿ ಮತ್ತು ಉಮೇಶ್ ನಿರೂಪಿಸಿದರು.