ಸಾಸ್ತಾನ ಟೋಲ್ ಸಿಬ್ಬಂದಿಯಿಂದ ವಿಕಲಾಂಗ ಯೋಧನನ್ನು ಅಗೌರವಿಸಿದ ಹೇಯ ಕೃತ್ಯ: ದೇಶದಾದ್ಯಂತ ಭುಗಿಲೆದ್ದ ಆಕ್ರೋಶ
ಪ್ರಕರಣದ ವಿವರ:
ಭಾರತ ಮಾತೆಯ ರಕ್ಷಣೆಗಾಗಿ ಯುದ್ಧವೊಂದರಲ್ಲಿ ವೀರಾವೇಶದಿಂದ ಹೋರಾಡಿ, ಗಾಯಗೊಂಡು ಚೇತರಿಸಿಕೊಂಡಿದ್ದ ನಿವೃತ್ತ ಯೋಧ ಶ್ಯಾಮರಾಜ್ ಎಂಬವರು ಭಾನುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಾ ಸಾಸ್ತಾನ ಟೋಲ್ ಗೇಟ್‌ಗೆ ಬಂದರು. ಯುದ್ಧದಲ್ಲಿ ಪರಾಕ್ರಮ ತೋರಿ ಗಾಯಗೊಂಡ ಸೈನಿಕರು, ಪದ್ಮ ಪ್ರಶಸ್ತಿ ಪುರಸ್ಕೃತರು, ಇನ್ನಿತರ ಗುರುತಿಸಲ್ಪಟ್ಟ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದವರಿಗೆ ದೇಶದಾದ್ಯಂತ ಟೋಲ್ ಗೇಟ್‌ಗಳಲ್ಲಿ ಸರ್ಕಾರ ವಿನಾಯಿತಿ ನೀಡಿದೆ. ಇದು ಅಂತಹ ಮಹಾನ್ ಸಾಧಕರ ಮೇಲಿನ ಗೌರವದಿಂದ ಜಾರಿಗೆ ತಂದ ಕ್ರಮ. ಆದರೆ, ಗೌರವದ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲದೇ, ಕೇವಲ ದುಂಡಾವರ್ತನೆಯ ಮೂಲಕವಾದರೂ ದುಡ್ಡು ವಸೂಲಿ ಮಾಡುವ ಚಾಳಿ ಹೊಂದಿರುವ ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಗಳು ಈ ಮಹಾನ್ ಯೋಧನನ್ನು ತಡೆದರು! ಮಾಮೂಲಿನಂತೆಯೇ ಟೋಲ್‌ಗಾಗಿ ಬೆದರಿಸಿದರು. ಈ ಯೋಧ ಸರ್ಕಾರಿ ವಿನಾಯಿತಿಯ ಎಲ್ಲ ದಾಖಲಾತಿಗಳನ್ನೂ ಹೊಂದಿದ್ದು, ಅದನ್ನು ಟೋಲ್ ನವರಿಗೆ ತೋರಿಸಿದರೂ ಅವರು ಕ್ಯಾರೇ ಎನ್ನಲಿಲ್ಲ. ಬದಲಾಗಿ ಗಾಲಿ ಕುರ್ಚಿಯಲ್ಲಿದ್ದ ಯೋಧನಿಗೆ ಉಡಾಫೆಯ ಮಾತನಾಡಿದರು.
ಈ ಬಗ್ಗೆ ಸ್ವತಃ ನಿವೃತ್ತ ಸೈನಿಕ ಶ್ಯಾಮರಾಜ್ ಅವರು ವಿಡಿಯೋ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ನಾನು ಟೋಲ್ ಸಿಬ್ಬಂದಿಯ ಬಳಿ ಭಿಕ್ಷೆ ಬೇಡುತ್ತಿಲ್ಲ ಎಂದಿದ್ದಾರೆ. ನಿಮ್ಮ ಮನೆಯಲ್ಲಿ ಯಾರಾದರೂ ಯೋಧರಿದ್ದರೆ ಅವರ ಕಷ್ಟಗಳೇನೆಂಬುದು ನಿಮಗೆ ಗೊತ್ತಾಗುತ್ತದೆ ಎಂದೂ ಹೇಳಿದ್ದಾರೆ. ಟೋಲ್ ಸಿಬ್ಬಂದಿ ಅಹಂಕಾರದಿಂದ ಅಲ್ಲೇ ಠಳಾಯಿಸುತ್ತಿ ದ್ದುದೂ ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ.
ಶ್ಯಾಮರಾಜ್ ಬಗ್ಗೆ:
ಯೋಧ ಶ್ಯಾಮರಾಜ್ ಅವರು ಇವಿ-೨೧ನೇ ಪ್ಯಾರಾ ಸ್ಪೆಷಲ್ ಫೋರ್ಸ್‌ನ ಪ್ಯಾರಾಟ್ರೂಪರ್ ಆಗಿದ್ದು, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನಿವಾಸಿಯಾಗಿದ್ದಾರೆ. ‘ಆಪರೇಷನ್ ಪರಾಕ್ರಮ್’ ಸಂದರ್ಭದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಗಿಸಿ ವಾಪಸ್ ಬರುವಾಗ, ಇವರ ವಾಹನ ಲ್ಯಾಂಡ್‌ಮೈನ್ ಮೇಲೆ ಹರಿದ ಪರಿಣಾಮ ಸಂಭವಿಸಿದ ಭೀಕರ ಸ್ಫೋಟದಲ್ಲಿ ೧೫ ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆಯಲ್ಲಿ ಜೀವ ಉಳಿಸಿಕೊಂಡ ಇಬ್ಬರು ಸೈನಿಕರಲ್ಲಿ ಶ್ಯಾಮರಾಜ್ ಒಬ್ಬರಾಗಿದ್ದಾರೆ. ಸುಮಾರು ೧೫ ದಿನಗಳ ಕಾಲ ಕೋಮಾದಲ್ಲಿದ್ದ ಅವರು ನಂತರ ಚೇತರಿಸಿಕೊಂಡರೂ, ಬೆನ್ನುಮೂಳೆಗೆ ಗಂಭೀರ ಗಾಯವಾದ ಕಾರಣ ಇಂದು ಸಂಪೂರ್ಣ ವಿಕಲಾಂಗ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಇವರ ಪತ್ನಿಯೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಿಲಿಟರಿ ನರ್ಸಿಂಗ್ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿಯ ಪೋಸ್ಟಿಂಗ್ ಸಂಬಂಧಿತ ಪ್ರಯಾಣಕ್ಕಾಗಿ ಆರ್.ಎಮ್.ಎ. ನೀಡಿದ ಅಧಿಕೃತ ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದರೂ, ಸಾಸ್ತಾನ ಟೋಲ್ ಸಿಬ್ಬಂದಿ ಎಳ್ಳಷ್ಟೂ ಗೌರವ ನೀಡಲಿಲ್ಲ. ಸರ್ಕಾರಿ ನಿಯಮದಂತೆ ವಿನಾಯಿತಿ ನೀಡಿಲ್ಲ ಎಂದು ಶ್ಯಾಮರಾಜ್ ದೂರಿದ್ದಾರೆ.
ಸಾಸ್ತಾನ ಟೋಲ್ ಗೇಟ್ ಸಿಬಂದಿಗಳು ಈ ಹಿಂದೆಯೂ ವಾಹನಗಳವರೊಂದಿಗೆ ಅನುಚಿತವಾಗಿ ವರ್ತಿಸುವುದು, ಧಮ್ಕಿ ಹಾಕುವುದು, ಲೇನ್ ತಪ್ಪಾದರೆ ಸರಿಯಾದ ಮಾಹಿತಿ ನೀಡುವುದು ಬಿಟ್ಟು ಬಯ್ಯುವುದು ಮುಂತಾದ ಅಕೃತ್ಯಗಳಿಂದಾಗಿ ಕುಖ್ಯಾತಿ ಗಳಿಸಿದ್ದಾರೆ. ದುಡ್ಡು ವಸೂಲಿಯೊಂದೇ ಇವರ ಗುರಿ.
ಇದರೊಂದಿಗೆ ಯೋಧನೊಂದಿಗಿನ ಅನುಚಿತ ನಡೆ ಒಂದು ಹೊಸ ಸೇರ್ಪಡೆ ಅಷ್ಟೇ. ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ನಿವೃತ್ತ ಸೈನಿಕನಿಗೆ ಗಣರಾಜ್ಯೋತ್ಸವದಂದೇ ಈ ರೀತಿಯ ವರ್ತನೆ ತೋರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸೈನಿಕರ ಗೌರವ ಮತ್ತು ಹಕ್ಕುಗಳನ್ನು ಕಾಪಾಡುವಲ್ಲಿ ಸಂಬಂಧಿತ ಇಲಾಖೆ, ಜನಪ್ರತಿನಿಧಿಗಳು ಗಂಭೀರ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.