ಅಯಿಕಾ ವಿಪುಲಾಮತಿ ಮಾತಾಜಿ, ಪ.ಪೂ. 105 ವಿಮುಕ್ತಮತಿ ಮಾತಾಜಿ ಹಾಗೂ ಕ್ಷುಲ್ಲಿಕಾ ವಿಶಾಲಮತಿ ಮಾತಾಜಿ ಮೂಡುಬಿದಿರೆಗೆ ಪುರಪ್ರವೇಶ
Thursday, January 29, 2026
ಮೂಡುಬಿದಿರೆ: ಆಚಾರ್ಯ ಚಾಣಿವಾಲೆ ಶಾಂತಿಸಾಗರ ಮುನಿರಾಜರ ಪರಂಪರೆಯ ಅಯಿಕಾ ವಿಪುಲಾಮತಿ ಮಾತಾಜಿ, ಪ.ಪೂ. 105 ವಿಮುಕ್ತಮತಿ ಮಾತಾಜಿ ಹಾಗೂ ಕ್ಷುಲ್ಲಿಕಾ ವಿಶಾಲಮತಿ ಮಾತಾಜಿ ಮೂಡುಬಿದಿರೆಗೆ ಗುರುವಾರ ಪುರಪ್ರವೇಶಗೈದರು.
ಅಲಂಗಾರು ಬಳಿಯಿಂದ ಪುರಪ್ರವೇಶ ಆರಂಭಗೊಂಡು, ಮೂಡುಬಿದಿರೆ ಜೈನ ಕಾಶಿಯ ಹದಿನೆಂಟು ಬಸದಿ ಶ್ರೀಮಠಕ್ಕೆ ಭಕ್ತಿಪೂರ್ವಕವಾಗಿ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಪರಮಾಗಮಗಳಾದ ಧವಳತ್ರಯ ಗ್ರಂಥಗಳ ದರ್ಶನವನ್ನು ಮಾತಾಜಿಗಳು ನಡೆಸಿದರು. ಅಲಂಗಾರು ಬಡಗ ಬಸದಿ ಬಳಿ ಶ್ರಾವಕ-ಶ್ರಾವಕಿಯರು ಭಾವದಿಂದ ಮಾತಾಜಿ ಸಂಘಕ್ಕೆ ಸ್ವಾಗತ ಕೋರಿದರು.
ಬಳಿಕ ಶ್ರೀ ದಿಗಂಬರ ಜೈನ ಮಠದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ, ಕುಷ್ಮಾಂಡಿನೀ ದೇವಿಗೆ ವಿಶೇಷ ಪೂಜೆ ಹಾಗೂ ಪದ್ಮಾವತಿ ದೇವಿಗೆ ಶೋಡಶೋಪಚಾರ ಪೂಜೆ ನೆರವೇರಿಸಲಾಯಿತು. ಸಾಯಂಕಾಲ ರೋಹಿಣಿ ವ್ರತ ನಿರತ ಮಾತಾಜಿ ಸಂಘವು ವೇಣೂರು ದಿಕ್ಕಿಗೆ ವಿಹಾರ ಕೈಗೊಂಡಿತು.