ಬೀಡಿ ಕೆಲಸಗಾರರ ಸಂಘದ 23ನೇ ವಾರ್ಷಿಕ ಮಹಾಸಭೆ
ಸಭೆಯನ್ನು ಉದ್ಘಾಟಿಸಿದ ಸೌತ್ ಕೆನರ ಬೀಡಿ ವರ್ಕ್ಸ್ ಫೆಡರೇಷನ್ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಮಾತನಾಡಿ, ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ 4 ಕಾರ್ಮಿಕ ಸಂಹಿತೆಗಳ ಮೂಲಕ ಹೊಸ ಕಾರ್ಮಿಕ ಕಾನೂನು ಜಾರಿಗೆ ತಂದಿದ್ದು, ಇದರಿಂದ ಕಾರ್ಮಿಕ ವರ್ಗದ ಮೂಲಭೂತ ಹಕ್ಕುಗಳಿಗೆ ಗಂಭೀರ ಧಕ್ಕೆ ಉಂಟಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒತ್ತಾಯಿಸಿ ಫೆಬ್ರವರಿ 12ರಂದು ನಡೆಯುವ ಅಖಿಲ ಭಾರತ ಮುಷ್ಕರವನ್ನು ಬೀಡಿ ಕಾರ್ಮಿಕರು ಸಂಘಟಿತವಾಗಿ ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.
ಸೌತ್ ಕೆನರಾ, ಬೀಡಿ ವರ್ಕ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಾರ್ಮಿಕರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಂಘಟಿತ ಹೋರಾಟ ಅನಿವಾರ್ಯ ಎಂದರು.
ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಜ.27ರಂದು ಮೂಡುಬಿದಿರೆಯಿಂದ ಮಂಗಳೂರಿಗೆ ನಡೆಯುವ ಕಾಲ್ನಡಿಗೆ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀಡಿ ಕಾರ್ಮಿಕರು ಭಾಗವಹಿಸಬೇಕೆಂದರು.
ಪ್ರಧಾನ ಕಾರ್ಯದರ್ಶಿ ರಾಧಾ ಕಳೆದ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರೆ, ಕೋಶಾಧಿಕಾರಿ ಗಿರಿಜಾ ಲೆಕ್ಕಪತ್ರಗಳನ್ನು ಮಂಡಿಸಿದರು.
ಮುಂದಿನ ಸಾಲಿನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರಮಣಿ ಅವರನ್ನು ಪುನರ್ ಆಯ್ಕೆ ಮಾಡಲಾಯಿತು. ಪದ್ಮಾವತಿ ಪುತ್ತಿಗೆ, ಶಕುಂತಲ ಕೆಸರುಗದ್ದೆ, ಜಲಜಾಕ್ಷಿ ಶಿರ್ತಾಡಿ ಹಾಗೂ ಯಶವಂತಿ ಕಾಂತಾವರ ಅವರಿಗೆ ಸಮಿತಿಯಲ್ಲಿ ಸ್ಥಾನ ಕಾಯ್ದಿರಿಸಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ರಾಧಾ ಪುತ್ತಿಗೆ, ಜೊತೆಯ ಕಾರ್ಯದರ್ಶಿಗಳಾಗಿ ಲಕ್ಷ್ಮಿ ಅಮ್ಮುಂಜಾಡಿ, ಕಲ್ಯಾಣಿ ಕೇಮಾರು, ಬೇಬಿ ಅಶ್ವಥಪುರ, ಕೃಷ್ಣಪ್ಪ ನಡಿಗಡ್ಡೆ ಹಾಗೂ ಲತಾ ಕಾಪಿಕಾಡು, ಕೋಶಾಧಿಕಾರಿಯಾಗಿ ಗಿರಿಜಾ ಮೂಡುಬಿದಿರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ರಾಧಾ ವಂದಿಸಿದರು.