ಆಳ್ವಾಸ್‌ನಲ್ಲಿ ಗಣರಾಜ್ಯೋತ್ಸವದ ವೈಭವ: 30 ಸಾವಿರಕ್ಕೂ ಅಧಿಕ ಜನಸಮೂಹದ ಮಧ್ಯೆ ಮೊಳಗಿದ ಏಕತೆ-ಸಮಾನತೆಯ ಸಂದೇಶ

ಆಳ್ವಾಸ್‌ನಲ್ಲಿ ಗಣರಾಜ್ಯೋತ್ಸವದ ವೈಭವ: 30 ಸಾವಿರಕ್ಕೂ ಅಧಿಕ ಜನಸಮೂಹದ ಮಧ್ಯೆ ಮೊಳಗಿದ ಏಕತೆ-ಸಮಾನತೆಯ ಸಂದೇಶ


ಮೂಡುಬಿದಿರೆ: ವೈವಿಧ್ಯತೆಯಲ್ಲಿ ಏಕತೆಯೇ ದೇಶದ ಸುಭದ್ರತೆ. ಜಾತಿ ಮತ ಮೀರಿದ ಬಾಂಧವ್ಯ ಹಾಗೂ ಸಮಾನತೆಯೇ ದೇಶದ ಸುಭದ್ರತೆಯ ಅಡಿಪಾಯ. ಕ್ರೀಯಾಶೀಲ ನ್ಯಾಯಾಂಗದಿಂದ ಸದೃಢ ಪ್ರಜಾಪ್ರಭುತ್ವ. ಈ ಸದೃಢತೆಗೆ ನ್ಯಾಯಾಲಯದ ಪಾತ್ರ ಬಹುಮುಖ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದರು. 


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುತ್ತಿಗೆ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ಬೃಹತ್ ವೇದಿಕೆಯಲ್ಲಿ ಸೋಮವಾರ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ  ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.


‘ಕಾನೂನು ಉಲ್ಲಂಘನೆ, ಅರಾಜಕತೆ ಮತ್ತಿತರ ಸಂದರ್ಭಗಳಲ್ಲಿ ನ್ಯಾಯಾಲಯವು ಪ್ರಜಾಪ್ರಭುತ್ವ ಚಿಂತನೆ ಮೂಲಕ ಪ್ರತಿ ನಾಗರಿಕರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ನ್ಯಾಯಾಲಯ ಎಚ್ಚರದಿಂದ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ  ಡಾ. ಎಂ ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ್ ಆಳ್ವ ಶ್ರೀಪತಿ ಭಟ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಉಪಸ್ಥಿತರಿದ್ದರು. 


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು, ಸ್ಥಳೀಯರು ಸೇರಿದಂತೆ 30000ಕ್ಕೂ ಅಧಿಕ ಜನಸಮೂಹ ದೇಶಭಕ್ತಿಯ ಕಹಳೆ ಮೊಳಗಿಸಿತು. 

ಇದಕ್ಕೂ ಮೊದಲು, ವಂದೇ ಮಾತರಂ  ಮೊಳಗಿದ ಬಳಿಕ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತ್ರಿವರ್ಣ ಧ್ವಜ ಆರೋಹಣ ಮಾಡಿದ್ದು, ಬಳಿಕ ರಾಷ್ಟ್ರಗೀತೆ ‘ಜನ ಗಣ ಮನ’ ಮೊಳಗಿತು. ಎಲ್ಲರೂ ಗೌರವ ಸಲ್ಲಿಸಿದರು.

ವೇದಿಕೆಯ ಬಾನೆತ್ತರದಲ್ಲಿ ತಿರಂಗಾ ಹಾರಾಡಿದರೆ, ಸಭಾಂಗಣದಲ್ಲಿ ನಿಂತ ವಿದ್ಯಾರ್ಥಿಗಳು ತ್ರಿವರ್ಣದಲ್ಲಿ  ಬಾರತ್ ಮೂಡಿಸುವ ಮೂಲಕ ದೇಶಪ್ರೇಮ ಸಾರಿದರು. 

ಆಳ್ವಾಸ್ ಸಂಸ್ಥೆಯ 6257 ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಭಾರತ ವನ್ನು ಮೂಡಿಸಿದರು.

ಸಾಂಸ್ಕೃತಿಕ ಗಾಯನ ತಂಡವು ಕೋಟಿ ಕಂಠೋಸೇ ಗಾನ ಹಾಡಿದಾಗ ಸಭಾಂಗಣದಲ್ಲಿ ಸೇರಿದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಎಲ್ಲರೂ ತ್ರಿವರ್ಣ  ರಾಷ್ಟ್ರ ಧ್ವಜ ಬೀಸಿ ದೇಶದ ಪ್ರೀತಿಯನ್ನು ಸಾದರ ಪಡಿಸಿದರು. ವೇದಿಕೆಗೆ ಬಂದ ತ್ರಿವರ್ಣ ಸಿಂಹ ವೇಷ  ವಿಶೇಷ ಮೆರುಗು ನೀಡಿದವು.

ಆವರಣದ ಎಲ್ಲೆಲ್ಲೂ ಕೇಸರಿ, ಬಿಳಿ, ಹಸಿರು ವರ್ಣದ ರಂಗು ಸಂಭ್ರಮಿಸಿತು. ಸುಮಾರು 300 ಕ್ಕೂ ಅಧಿಕ ಮಾಜಿ ಸೈನಿಕರೂ ಧ್ವಜಕ್ಕೆ ವಂದನೆ ಸಲ್ಲಿಸಿದರು. ಬಾನಂಗಳಕ್ಕೆ ತ್ರಿವರ್ಣ ರಂಗು ಬ್ಲೋವರ್ ಮೂಲಕ ಚಿಮ್ಮಿ ಬಂತು.

ಆರಂಭದಲ್ಲಿ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಗೌರಿ ಜಿ.ಪಿ ಅವರಿಂದ ಗೌರವ ಶ್ರೀರಕ್ಷೆ  ಸ್ವೀಕರಿಸಿದ ನ್ಯಾಯಮೂರ್ತಿ ಅವರು,  ಬ್ಯಾಂಡ್ ಹಾಗೂ ಗೌರವಗಳೊಂದಿಗೆ ವೇದಿಕೆಗೆ ಬಂದರು. ಸೀನಿಯರ್ ಅಂಡರ್ ಆಫೀಸರ್ ಯದುನಂದನ್ ಪರೇಡ್ ವರದಿ ಸಲ್ಲಿಸಿದರು. ಕರ್ನಾಟಕ ಸಿಇಟಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಅಕ್ಷಯ್ ಹೆಗ್ಡೆ ಅವರಿಗೆ ೨ಲಕ್ಷ ರೂಪಾಯಿ ನೀಡಿ ಗೌರವಿಸಲಾಯಿತು.

ಫ್ಲ್ಯಾಗ್ ಏರಿಯಾದಲ್ಲಿ ವಸುದೈವ ಕುಟುಂಬಕಂ ಪರಿಕಲ್ಪನೆಯ ಮಣ್ಣಿನ ಕಲಾಕೃತಿ ಎಲ್ಲರ ಗಮನ ಸೆಳೆಯಿತು.

ಉಪನ್ಯಾಸಕರಾದ ರಾಜೇಶ್ ಡಿ’ಸೋಜಾ ಹಾಗೂ ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article