ಮಿಜಾರು: ಆಟದ ಮೈದಾನದಲ್ಲಿ ಶಾಲಾ ಕಟ್ಟಡ ನಿಮಾ೯ಣಕ್ಕೆ ಆಕ್ಷೇಪ

ಮಿಜಾರು: ಆಟದ ಮೈದಾನದಲ್ಲಿ ಶಾಲಾ ಕಟ್ಟಡ ನಿಮಾ೯ಣಕ್ಕೆ ಆಕ್ಷೇಪ


ಮೂಡುಬಿದಿರೆ: ತಾಲೂಕಿನ ಮಿಜಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಟದ ಮೈದಾನದಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿರುವ ಶಾಲಾ ಆಡಳಿತ ಮಂಡಳಿಯ ನಿರ್ಧಾರಕ್ಕೆ ತೋಡಾರು, ಬಡಗಮಿಜಾರು ಮತ್ತು ತೆಂಕಮಿಜಾರು ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಡಿ.ಎ ಉಸ್ಮಾನ್ ಸುಮಾರು ನೂರು ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಈಗಾಗಲೇ ಮಂಜೂರಾಗಿರುವ ನಾಲ್ಕು ಹೊಸ ಕೊಠಡಿಗಳನ್ನು ಮೈದಾನದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಆದರೆ, ಇದರಿಂದ ದಶಕಗಳ ಇತಿಹಾಸವಿರುವ ಕ್ರೀಡಾಂಗಣದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ಈ ಮೈದಾನವು ವಲಯ, ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಿಗೆ ಸಾಕ್ಷಿಯಾದ ಈ ಭಾಗದ ಏಕೈಕ ಪ್ರಮುಖ ಗ್ರಾಮೀಣ ಕ್ರೀಡಾಂಗಣವಾಗಿದೆ. ಸುಮಾರು 85 ವರ್ಷಗಳ ಹಿಂದೆ 2.95 ಎಕರೆ ಜಾಗವನ್ನು ಆಟದ ಮೈದಾನಕ್ಕೆಂದೇ ಕಾಯ್ದಿರಿಸಲಾಗಿತ್ತು. ಅದರಲ್ಲಿ ಈಗಾಗಲೇ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಕಟ್ಟಡಗಳಿಗಾಗಿ 95 ಸೆಂಟ್ಸ್ ಬಿಟ್ಟುಕೊಡಲಾಗಿದ್ದು, ಸದ್ಯ ಕೇವಲ 2 ಎಕರೆ ಮಾತ್ರ ಉಳಿದಿದೆ. ಈಗ ಇದನ್ನೂ ಕಟ್ಟಡ ನಿರ್ಮಾಣಕ್ಕೆ ಬಳಸಿದರೆ ವಿದ್ಯಾರ್ಥಿಗಳಿಗೆ ಆಟೋಟಗಳಿಗೆ ಜಾಗವೇ ಇಲ್ಲದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಬದಲಿ ವ್ಯವಸ್ಥೆಗೆ ಆಗ್ರಹ:

"ಮೈದಾನವನ್ನು ಹಾಳುಮಾಡುವ ಬದಲು, ಶಾಲೆಯಲ್ಲಿರುವ40 ವರ್ಷ ಹಳೆಯದಾದ, ಜೀರ್ಣಾವಸ್ಥೆಯಲ್ಲಿರುವ ಹಂಚಿನ ಮಾಡಿನ ಕೊಠಡಿಗಳನ್ನು ತೆರವುಗೊಳಿಸಿ ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಲಿ" ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು (DDPI), ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಪೋಷಕರು ಮನವಿ ಸಲ್ಲಿಸಿ, ಮೈದಾನವನ್ನು ಅದರ ಮೂಲ ರೂಪದಲ್ಲಿ ಉಳಿಸಿಕೊಡುವಂತೆ ಆಗ್ರಹಿಸಿದ್ದಾರೆ.

ತೆಂಕಮಿಜಾರು ಗ್ರಾ.ಪಂ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ತಾ.ಪಂ ಮಾಜಿ ಸದಸ್ಯ  ಎಂ.ಜಿ ಮಹಮ್ಮದ್ , ಗ್ರಾ.ಪಂ ಸದಸ್ಯ ಎಂ.ಎ ರಝಾಕ್ , ಎಂ.ಎ ಅಶ್ರಪ್, ಗ್ರಾಮಸ್ಥರಾದ ನವದೀಪ್ ಶೆಟ್ಟಿ, ಝುಬೇರ್, ಅಫೀಝ್ ಸುದ್ದಿಗೋಷ್ಠಿಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article