ಕಾನೂನು ಶಿಕ್ಷಣ ಪಡೆದರೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ: ರೂಪಾ ಬಲ್ಲಾಳ್ ಮಾನಾ೯ಡ್
Tuesday, January 20, 2026
ಮೂಡುಬಿದಿರೆ: ವಕೀಲರ ವೃತ್ತಿ ಶ್ರೇಷ್ಠವಾದುದು. ಯಾವುದೇ ವಿಷಯದಲ್ಲಿ ಡಿಗ್ರಿಯನ್ನು ಪಡೆದುಕೊಂಡರೂ ಎಲ್‌ಎಲ್‌ಬಿಯನ್ನು ಮಾಡಲು ಅವಕಾಶವಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಬೇಕೆಂದು ಯುವ ವಕೀಲೆ ರೂಪ ಬಲ್ಲಾಳ್ ಮಾನಾ೯ಡ್ ಹೇಳಿದರು.
ಅವರು ನೀಕೆ೯ರೆ ಪ್ರೌಢಶಾಲೆಯ ವಿದ್ಯಾಥಿ೯ಗಳಿಗೆ ಕಾನೂನು ಅರಿವು ಮತ್ತು ವೃತ್ತಿ ಮಾಗ೯ದಶ೯ನದ ಬಗ್ಗೆ ಮಾಹಿತಿ ನೀಡಿ, ಎಲ್‌ಎಲ್‌ಬಿಯನ್ನು ಮಾಡಿದರೆ ಶಿಕ್ಷಕ, ಬ್ಯಾಂಕಿಂಕ್, ಮಾದ್ಯಮ ಕ್ಷೇತ್ರಗಳಲ್ಲಿ ಮತ್ತು ನ್ಯಾಯಧೀಶರಾಗಿಯೂ ಸೇವೆ ಸಲ್ಲಿಸಲು ಅವಕಾಶಗಳಿವೆ ಎಂದರು.
ಹೆಣ್ಣು ಮತ್ತು ಗಂಡು ಮಕ್ಕಳಿಗೆ ಶಾಲೆಗಳಲ್ಲಿ, ಮನೆಗಳಲ್ಲಿ ಹಾಗೂ ಬಸ್‌ಗಳಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳಗಳಾದರೆ ತೊಂದರೆಗಳಾದರೆ ತಮ್ಮ ಹೆತ್ತವರ ಅಥವಾ ಶಿಕ್ಷಕರಿಗೆ ತಿಳಿಸುವಂತೆ ಹೇಳಿದ ಅವರು ಫೋಕ್ಸೋ ಕಾಯಿದೆಯ ಬಗ್ಗೆ ತಿಳಿಸಿದರು.
18 ವಷ೯ದ ಒಳಗಿನ ಮಕ್ಕಳು ವಾಹನವನ್ನು ಚಲಾಯಿಸಿದರೆ, ಹೆಲ್ಮೆಟ್ ಧರಿಸದಿದ್ದರೆ ಆಗುವ ಅನಾಹುತಗಳ ಬಗ್ಗೆ ಉದಾಹರಣೆ ಸಹಿತ ವಿವಿರಿಸಿದ ಅವರು ಮಾನವೀಯ ಮೌಲ್ಯಗಳನ್ನು ಬೆಳೆಸುವಂತೆ, ಹಿರಿಯ ಜೀವಗಳಿಗೆ, ಹೆತ್ತವರಿಗೆ ಹಾಗೂ ಶಿಕ್ಷಕರಿಗೆ ಗೌರವ ನೀಡುವಂತೆ ಸಲಹೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಡಾ. ಪ್ರತಿಮಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕೆಂಬ ನಿಟ್ಟಿನಲ್ಲಿ ಕಾಯ೯ಕ್ರಮವನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಮೂಡುಬಿದಿರೆ ಪ್ರೆಸ್‌ಕ್ಲಬ್‌ನ ಕಾಯ೯ದಶಿ೯ ಪ್ರೇಮಶ್ರೀ ಕಲ್ಲಬೆಟ್ಟು ಉಪಸ್ಥಿತರಿದ್ದರು.
ಶಿಕ್ಷಕಿ ಅನುಪಮಾ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.

