ಪಾಲಡ್ಕದ ಅಮೇಜಿಂಗ್ ಗ್ರೇಸ್ ಕಂಪೌಂಡ್ ನಲ್ಲಿ ಗಣರಾಜ್ಯೋತ್ಸವ ಆಚರಣೆ: ಐವರಿಗೆ ಶ್ರೇಷ್ಠ ಮಾನವರತ್ನ ಪ್ರಶಸ್ತಿ ಪ್ರದಾನ
ಪಾಲಡ್ಕ ಗ್ರಾ.ಪಂ. ಅಧ್ಯಕ್ಷೆ ಅಮಿತಾ ನಾಯ್ಕ್ ಧ್ವಜರೋಹಣಗೈದರು.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಸಾಮಾಜಿಕ ನ್ಯಾಯ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಡಾ.ಜೋನ್ ಸೈಮನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, “ದೇಶಕ್ಕೆ ಸ್ವಾತಂತ್ರ್ಯವು 1947ರ ಆಗಸ್ಟ್ 15ರಂದು ದೊರಕಿತು. ಆದರೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನಿಜವಾದ ಅಧಿಕಾರ, ಹಕ್ಕುಗಳು ಮತ್ತು ಸಮಾನತೆ 1950ರ ಜನವರಿ 26ರಂದು ಸಂವಿಧಾನದ ಮೂಲಕ ದೊರಕಿತು” ಎಂದು ತಿಳಿಸಿ, ಸಂವಿಧಾನವನ್ನು ಗೌರವಿಸಿ ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಕೀಲರಾದ ಪ್ರದೀಪ್ ಅವರು ಗಣರಾಜ್ಯೋತ್ಸವದ ಮಹತ್ವ ಮತ್ತು ಭಾರತೀಯ ಸಂವಿಧಾನದ ಮೌಲ್ಯಗಳ ಕುರಿತು ಉಪನ್ಯಾಸಗಳನ್ನು ನೀಡಿದರು.
ಸನ್ಮಾನ: ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ಅಮರನಾಥ ಶೆಟ್ಟಿ ಟ್ರಸ್ಟ್ ನ ಸ್ಥಾಪಕಾಧ್ಯಕ್ಷೆ ಡಾ.ಅಮರಶ್ರೀ ಶೆಟ್ಟಿ, ಹಾಸ್ಯ ಕಲಾವಿದ ಅರವಿಂದ್ ಬೊಳಾರ್, ಗಿನ್ನಿಸ್ ದಾಖಲೆ ನಿಮಿ೯ಸಿರುವ ಕಾಕ೯ಳದ ಸುರೇಂದ್ರ ಆಚಾರ್ಯ ಹಾಗೂ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರಿಗೆ ಶ್ರೇಷ್ಠ ಮಾನವ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಉಡುಪಿ ಮತ್ತು ಮಂಗಳೂರಿನ ಸಮಿತಿಯ ನಿರ್ದೇಶಕರಾದ ಅಶೋಕ್, ಕೀರ್ತಿ ಅಶೋಕ್, ಸುನೀತ ವಲೇರಿಯನ್ ಕಾರ್ಡೋಜ ಜೊತೆಗೆ ಸಂಸ್ಥೆಯ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.
