ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಸಂಸದ ಕ್ಯಾ. ಬ್ರಿಜೇಶ್ ಚೌಟ
ಮೂಡುಬಿದಿರೆ: ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕರೆ ನೀಡಿದರು.
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಆಯೋಜಿಸಲಾದ ರಾಷ್ಟ್ರ ನಿರ್ಮಾಣಕ್ಕಾಗಿ ನಾಯಕತ್ವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ವಿಷಯಗಳನ್ನು ನೋಡುವ ದೃಷ್ಟಿಕೋನದಲ್ಲೇ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಆ ಬದಲಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪಾತ್ರ ಅಪಾರವಾಗಿದೆ. ಅನೇಕ ಪಥಪ್ರದರ್ಶಕ ಕಾರ್ಯಗಳನ್ನು ಸಂಸ್ಥೆ ಕೈಗೊಂಡಿದ್ದು, ರಾಷ್ಟ್ರ ನಿರ್ಮಾಣದ ದೃಷ್ಟಿಯಿಂದ ಆಯೋಜಿಸಿರುವ ಈ ನಾಯಕತ್ವ ಶಿಬಿರ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.
ಸುಮಾರು 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಆಳ್ವಾಸ್ ಶಿಕ್ಷಣ ಸಂಸ್ಥೆ, ದೇಶದ ವಿವಿಧ ಭಾಷೆ, ಸಂಸ್ಕೃತಿ, ಆಚಾರ–ವಿಚಾರಗಳನ್ನು ಪ್ರತಿನಿಧಿಸುವ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ರಾಷ್ಟ್ರೀಯತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಪ್ರಶಂಸಿಸಿದರು. ಈ ನಿಟ್ಟಿನಲ್ಲಿ ಡಾ. ಮೋಹನ್ ಆಳ್ವ ಅವರ ಸೇವೆಗೆ ಅಭಿನಂದನೆ ಸಲ್ಲಿಸಿದರು.
ನಾಯಕತ್ವವು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಹಾಗೂ ಎಲ್ಲ ಕ್ಷೇತ್ರಗಳಲ್ಲೂ ನಾಯಕತ್ವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, ಸಮಾಜದಲ್ಲಿ ನಾಯಕತ್ವದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕಿದೆ ಎಂದರು.
ಮಿಲಿಟರಿ ಹಿನ್ನೆಲೆಯನ್ನು ಉಲ್ಲೇಖಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ, ನಾಯಕತ್ವದ ಪ್ರಮುಖ ಗುಣಗಳ ಕುರಿತು ಮಾತನಾಡಿ, “ನಾಯಕ ಎಂದರೆ ತನ್ನನ್ನು ತಾನು ಕೊನೆಯ ಸ್ಥಾನದಲ್ಲಿ ಇಟ್ಟುಕೊಳ್ಳುವವನು. ಸ್ವಾರ್ಥವನ್ನು ತ್ಯಜಿಸಿ ದೇಶದ ಹಿತಕ್ಕೆ ಮೊದಲ ಆದ್ಯತೆ ನೀಡುವ ಮನಸ್ಥಿತಿಯೇ ನಿಜವಾದ ನಾಯಕತ್ವ,” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ದೇಶದ ಭವಿಷ್ಯ ರೂಪಿಸುವಲ್ಲಿ ಶಿಸ್ತು, ಸೇವಾಭಾವ ಹಾಗೂ ನಾಯಕತ್ವ ಗುಣಗಳು ಅತ್ಯಗತ್ಯವೆಂದರು.
“ಶಿಕ್ಷಣವೆಂದರೆ ಕೇವಲ ಅಂಕಗಳ ಸಾಧನೆ ಅಲ್ಲ; ಅದು ಜ್ಞಾನೋದಯ. ಜ್ಞಾನದಿಂದ ಒಳಗಿನ ಬೆಳಕು ಮೂಡಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ,” ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ಶಿಕ್ಷಣ ತತ್ತ್ವವನ್ನು ಉಲ್ಲೇಖಿಸಿ, ರಾಷ್ಟ್ರ ನಿರ್ಮಾಣವೇ ಶಿಕ್ಷಣದ ಅಂತಿಮ ಗುರಿಯೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತರಾಗದೆ ಸಮಾಜಮುಖಿ ಚಿಂತನೆಯೊಂದಿಗೆ ರಾಷ್ಟ್ರ ಸೇವೆಗೆ ಮುಂದಾಗಬೇಕು. ಮೊಬೈಲ್‌ಗಳಿಲ್ಲದ ಕಾಲದಲ್ಲಿಯೇ ಭಾರತವು ವಿವಿಧ ಭಾಷೆ, ಧರ್ಮ ಹಾಗೂ ಸಮುದಾಯಗಳ ನಡುವೆಯೂ ಸಂವಿಧಾನದ ಬಲದಿಂದ ಏಕತೆಯಿಂದ ನಿಂತಿದೆ. ಸಂವಿಧಾನವು ನಾಗರಿಕರಿಗೆ ಹಕ್ಕುಗಳ ಜೊತೆಗೆ ಜವಾಬ್ದಾರಿಯನ್ನೂ ನೀಡಿದೆ ಎಂದು ಹೇಳಿದರು. ವಿಶ್ವದಲ್ಲೇ ಅತಿದೊಡ್ಡ ಯುವಜನಸಂಖ್ಯೆ ಹೊಂದಿರುವ ಭಾರತಕ್ಕೆ ಸೂಕ್ತ ಮಾರ್ಗದರ್ಶನ ಇಲ್ಲದಿದ್ದರೆ ಯುವಶಕ್ತಿ ದಾರಿ ತಪ್ಪುವ ಸಾಧ್ಯತೆ ಇರುವುದಾಗಿ ಎಚ್ಚರಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಭಾವೈಕ್ಯ ಶಿಬಿರದ ಸಹಾಯಕ ನಿರ್ದೇಶಕ ಜನಾರ್ದನ ಚಕ್ರವರ್ತಿ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು.
ನಿಯತಿ ಎನ್. ಅಮಿನ್ ಕಾರ್ಯಕ್ರಮ ನಿರೂಪಿಸಿದರು. ಫೆನಿಲ್ಡಾ ಮರಿಯಾ ವರ್ಗೀಸ್ ವಂದಿಸಿದರು.
ಶಿಬಿರದ ಅಂಗವಾಗಿ ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸಗಳು ನಡೆಯಿತು. ವಿಧಾನಮಂಡಲದ ಪಾತ್ರ ಮತ್ತು ಸಂವಿಧಾನಾತ್ಮಕ ಆದರ್ಶಗಳು, ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರ ನಿರ್ಮಾಣ, ಮಾಧ್ಯಮದ ಜವಾಬ್ದಾರಿ ಕುರಿತು ಕಿಮ್ಮನೆ ರತ್ನಾಕರ್, ರಾಮಚಂದ್ರ ಮಿಜಾರ್, ಡಿಐಎಸ್‌ಪಿ ಅಬ್ದುಲ್ ಅಹದ್ ಐಪಿಎಸ್), ಐಐಎಸ್‌ಸಿ ಆರ್ಗ್ಯಾನಿಕ್ ನ್ಯಾನೋಎಲೆಕ್ಟ್ರಾನಿಕ್ಸ್ ಗುಂಪಿನ ವಿಜ್ಞಾನಿ ಪ್ರವೀಣ್ ಸಿ. ರಾಮಮೂರ್ತಿ ಹಾಗೂ ಅಂಕಣಕಾರ ಪ್ರೊ. ಪ್ರೇಮ್ ಶೇಖರ್ ಉಪನ್ಯಾಸ ನೀಡಿದರು.