ಪ್ರತಿಭೆಗಳ ಪ್ರೋತ್ಸಾಹಕಿ ನಿಡ್ಡೋಡಿ ಪದ್ಮಶ್ರೀ ಭಟ್‌ಗೆ ರಾಣಿ ಅಬ್ಬಕ್ಕ ಪ್ರೇರಣಾ ಗೌರವ
Saturday, January 17, 2026
ಮೂಡುಬಿದಿರೆ: ರಾಣಿ ಅಬ್ಬಕ್ಕ ಅವರ 500ನೇ ಜನ್ಮ ವರ್ಷಾಚರಣೆಯ ಸವಿನೆನಪಿಗಾಗಿ, ‘ಜವನೆರ್ ಬೆದ್ರ’ ತಂಡವು ನೀಡುವ ಪ್ರತಿಷ್ಠಿತ ರಾಣಿ ಅಬ್ಬಕ್ಕ ಪ್ರೇರಣಾ ಗೌರವಕ್ಕೆ ನಿಡ್ಡೋಡಿಯ ಪದ್ಮಶ್ರೀ ಭಟ್ ಅವರು ಆಯ್ಕೆಯಾಗಿದ್ದಾರೆ.
‘ಆರದಿರಲಿ ಬದುಕು ಆರಾಧನಾ’ ತಂಡದ ನಿರ್ದೇಶಕಿಯಾಗಿರುವ ಪದ್ಮಶ್ರೀ ಭಟ್ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಪರೂಪದ ವ್ಯಕ್ತಿತ್ವ. ಕಳೆದ ಎಂಟು ವರ್ಷಗಳಿಂದ ಪ್ರತಿ ತಿಂಗಳು ತಪ್ಪದೇ ಅನಾರೋಗ್ಯ ಪೀಡಿತರಿಗೆ ಆರ್ಥಿಕ ಹಾಗೂ ಮಾನವೀಯ ನೆರವು ನೀಡುತ್ತಾ ಬಂದಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರತಿಭೆಗಳ ಪ್ರೋತ್ಸಾಹಕಿ:
‘ವಾಯ್ಸ್ ಆಫ್ ಆರಾಧನಾ’ ಸಂಸ್ಥೆಯ ಮೂಲಕ ರಾಜ್ಯದ ವಿವಿಧೆಡೆ ಮಕ್ಕಳ ಮೇಳಗಳನ್ನು ಆಯೋಜಿಸಿರುವ ಇವರು, ನೂರಾರು ಪ್ರತಿಭಾವಂತ ಮಕ್ಕಳನ್ನು ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವೃತ್ತಿಯಿಂದ ಪತ್ರಕರ್ತೆಯಾಗಿರುವ ಪದ್ಮಶ್ರೀ ಅವರು ಸಾಮಾಜಿಕ ಹೋರಾಟಗಳಲ್ಲೂ ಸಕ್ರಿಯರಾಗಿದ್ದಾರೆ.
ಜನೆವರಿ 18ರಂದು ಮಧ್ಯಾಹ್ನ 3.45ಕ್ಕೆ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಇವರಿಗೆ ‘ಚೌಟ ರಾಣಿ ಅಬ್ಬಕ್ಕ ಪ್ರೇರಣಾ ಪತ್ರ’ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.