ಹಸು ಸಾಗಾಟ ಪ್ರಕರಣ ಮತ್ತೆ ಪ್ರತಿಭಟನೆ-ಜಿಪಿಎಸ್ ಚಿತ್ರದ ಮೂಲಕ ಹಸು ಗುರುತು: ಪ್ರತಿಭಟನೆಗೆ ತೆರೆ
ಇದರ ಮುಂದುವರಿದ ಭಾಗವಾಗಿ ರಾತ್ರಿ ಪಶು ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಹಸುಗಳನ್ನು ಪರಿಶೀಲಿಸಲಾಗಿತ್ತು. ಆದರೆ ಗಬ್ಬದ ಹಸುವಿನ ಗುರುತಿಗಾಗಿ ಮತ್ತೆ ಶನಿವಾರ ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಪೊಲೀಸರು ಹಸುಗಳನ್ನು ವಶಕ್ಕೆ ತೆಗೆದುಕೊಂಡ ಸಂದರ್ಭ ಜಿಪಿಎಸ್ ಫೋಟೊ ತರಿಸಿ ಪರಿಶೀಲಿಸುವಂತೆ ಆಗ್ರಹಿಸಿದರು. ಕೊನೆಗೂ ಸಹಾಯಕ ಆಯುಕ್ತರು ಮತ್ತು ಡಿವೈಎಸ್ಪಿ ಸಮಕ್ಷಮದಲ್ಲಿ ಹಸುವಿನ ಚಿತ್ರ ನೋಡಿ ಗುರುತು ಹಿಡಿದ ಬಳಿಕ ಹಸುಗಳಿಗೆ ಸಂಬಂಧಿಸಿದ ಪೂರ್ಣ ವರದಿ ಪಡೆದುಕೊಂಡ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಪೊಲೀಸರು ದಾಖಲಿಸಿದ ವರದಿಯಲ್ಲಿ ಹಸುಗಳನ್ನು ಮಾಂಸಕ್ಕಾಗಿ ಕಸಾಯಿಖಾನೆಗೆ ಒಯ್ಯಲಾಗುತ್ತಿದೆ ಎಂದು ದಾಖಲಿಸಿರುವುದನ್ನು ಪ್ರತಿಭಟಿಸಿ ಶುಕ್ರವಾರ ರೈತ ಸಂಘ ಪ್ರತಿಭಟನೆ ನಡೆಸಿತ್ತು. ಯಾವ ಮಾನದಂಡದಿಂದ ಪೊಲೀಸರು ವರದಿ ನೀಡಿದ್ದಾರೆ. ಈ ಬಗ್ಗೆ ನಮಗೆ ಸರಿಯಾದ ವರದಿ ನೀಡಬೇಕು. ಇಲ್ಲವಾದರೆ ತಾಲೂಕು ಕಚೇರಿಗೆ ಬೀಗ ಜಡಿದು ಧರಣಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದರು.
ಆ ಬಳಿಕ ಸಹಾಯಕ ಕಮೀಷನರ್ ಅವರ ಜೊತೆ ಮತುಕತೆ ನಡೆಸಿ ಪಶುವೈದ್ಯಾಧಿಕಾರಿಗಳ ಮೂಲಕ ಹಸುವನ್ನು ಬಿಟ್ಟ ಕಳೆಂಜದ ಗೋಶಾಲೆಗೆ ಹೋಗುವುದಾಗಿ ತೀರ್ಮಾನ ಕೈಗೊಳ್ಳಲಾಯಿತು. ರಾತ್ರಿ ವೇಳೆ ಗೋ ಶಾಲೆಯಲ್ಲಿ ಹಸು ಮತ್ತು ಕರುವನ್ನು ಪತ್ತೆ ಮಾಡಿ ಗುರುತಿಸಲಾಗಿತ್ತು. ಆದರೆ ಕತ್ತಲು ಆವರಿಸಿದ್ದರಿಂದ ಗಬ್ಬದ ಹಸುವನ್ನು ಮಾತ್ರ ಗುರುತು ಹಿಡಿಯಲು ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ ಪೊಲೀಸರಿಂದ ಹಸುವನ್ನು ವಶಕ್ಕೆ ಪಡೆಯುವ ಸಂದರ್ಭ ನಡೆಸಿದ ಮಹಜರು ಪತ್ರದ ಚಿತ್ರವನ್ನು ರೈತ ಸಂಘದಿಂದ ಕೇಳಲಾಗಿತ್ತು.
ಈ ವೇಳೆ ಅದು ಸಿಗದ ಹಿನ್ನೆಲೆ ಮತ್ತು ಅಧಿಕಾರಿಗಳು ನಮ್ಮನ್ನು ರಾತ್ರಿ ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ರೈತ ಸಂಘದ ಮುಖಂಡರು ಶನಿವಾರ ಬೆಳಗ್ಗೆ ಮತ್ತೆ ಪುತ್ತೂರು ತಾಲೂಕು ಆಡಳಿತ ಸೌಧದ ಮೆಟ್ಟಲುಗಳ ಮೇಲೆ ಕುಳಿತು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಸಹಾಯಕ ಕಮೀಷನರ್ ಅವರು ಸ್ಥಳಕ್ಕೆ ಅಗಮಿಸಿ ನಿನ್ನೆ ಗೋಶಾಲೆಯಲ್ಲಿ ನಡೆದ ವಿಚಾರಗಳ ಮಾಹಿತಿ ಪಡೆದು ಎರಡು ಮೂರು ಮಂದಿ ಮುಖಂಡರು ಕಚೇರಿಗೆ ಬಂದು ಪೊಲೀಸರು ಗೋವುಗಳನ್ನು ವಶಕ್ಕೆ ಪಡೆದ ಜಿಪಿಎಸ್ ಆಧಾರಿತ ಪೊಟೋ ನೋಡುವಂತೆ ಮತ್ತು ಪಶು ವೈದ್ಯರ ಹಾಗು ಸಂಬಂಧಿಸಿದ ವರದಿಯನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಇದೇ ಸಂದರ್ಭ ಡಿವೈಎಸ್ಪಿ ಪ್ರಮೋದ್ ಅವರು ಕೂಡಾ ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು. ಅದರಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ್ರು, ಯುವ ಘಟಕದ ಅಧ್ಯಕ್ಷ ವಿನೋದ್ ಗೌಡ, ಕೃಷ್ಣಯ್ಯ ಗೌಡ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಸಾಮೂಹಿಕ ನಾಯಕತ್ವದ ಜಿಲ್ಲಾಧ್ಯಕ್ಷ ರೂಪೇಶ್ ಅಲಿಮಾರ್ ಸಹಾಯಕ ಕಮೀಷನರ ಕಚೇರಿಯಲ್ಲಿ ಲ್ಯಾಪ್‌ಟಾಪ್ ಮೂಲಕ ಪೊಲೀಸರು ಗೋವುಗಳನ್ನು ವಶಕ್ಕೆ ಪಡೆದಾಗ ಜಿ.ಪಿ.ಎಸ್ ಆಧಾರಿತ ಪೊಟೋ ತೋರಿಸಿದರು. ಕೊನೆಗೂ ಗೊಂದಲಕ್ಕೆ ತೆರೆ ಎಳೆಯಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ರೈತ ಸಂಘದ ಮುಖಂಡಾರ ಶ್ರೀಧರ್ ಶೆಟ್ಟಿ ಬೈಲುಗುತ್ತು, ಅಮರನಾಥ ಆಳ್ವ, ಭಾಸ್ಕರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.