ಅಕ್ರಮ ಗೋಸಾಗಾಟದ ವಿರುದ್ಧ ಕಾನೂನುಕ್ರಮ: ಪೊಲೀಸರ ಕರ್ತವ್ಯಕ್ಕೆ ಹಿಂದು ಸಂಘಟನೆಗಳ ಬೆಂಬಲ
ಪುತ್ತೂರು: ಜ.10 ರಂದು ಬಳ್ಪ ಭಾಗದಿಂದ ಪಿರಿಯಾಪಟ್ಟಣಕ್ಕೆ ವಾಹನದಲ್ಲಿ ಹಿಂಸಾತ್ಮಕವಾಗಿ ಗೋವು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಸಾಗಾಟದಾರರಲ್ಲಿ ಗೋವು ಸಾಗಾಟಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಕಾನೂನು ಕ್ರಮ ಕೈಗೊಂಡಿರುವುದು ಸೂಕ್ತವಾಗಿದೆ. ಅಕ್ರಮವಾಗಿ ಸಾಕಾಣಿಕೆಯ ಸೋಗಿನಲ್ಲಿ ಗೋವುಗಳನ್ನು ಕಸಾಯಿಖಾನೆಗಳಿಗೆ ಸಾಗಿಸುವ ಪ್ರವೃತ್ತಿ ಪುನರಾವರ್ತನೆಯಾಗದಂತೆ ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವ ಇಂತಹ ಕಠಿಣ ಕ್ರಮಗಳಿಗೆ ನಮ್ಮ ಬೆಂಬಲವಿದೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಮೋಹನ್‌ದಾಸ್ ಕಾಣಿಯೂರು, ದ.ಕ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಬಂದ ಬಳಿಕ ಕಟ್ಟು ನಿಟ್ಟಿನ ಕಾನೂನು ಪಾಲನೆ ಆಗುತ್ತಿದೆ. ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ತಡೆ ಆಗಿದೆ. ಕಾನೂನು ಹಾಗೂ ಶಾಂತಿ ಸುವ್ಯವಸ್ಥೆಯ ದೃಷ್ಟಿಯಿಂದ ಆಗುತ್ತಿರುವ ಈ ಉತ್ತಮ ಬೆಳವಣಿಗೆ ಶ್ಲಾಘನೀಯ ಎಂದರು.
ಗೋವುಗಳ ಸಾಗಾಟದ ಸಂದರ್ಭದಲ್ಲಿ 100 ಮೀ. ದೂರವಿದ್ದರೂ ಸ್ಥಳೀಯ ಗ್ರಾ.ಪಂ. ನಿಂದ, ಪಶು ವೈದ್ಯರ ಮೂಲಕ ಫಿಟ್‌ನೆಸ್ ಸರ್ಟಿಫಿಕೇಟ್ ಪಡೆದು ಸಾಗಿಸುವ ನಿಯಮ ನಮ್ಮಲ್ಲಿದೆ. ಆದರೆ ಹೊರ ಜಿಲ್ಲೆಯಿಂದ ಬಂದು ಕಾನೂನಾತ್ಮಕವಾಗಿ ಯಾವುದೇ ದಾಖಲೆಗಳಿಲ್ಲದೆ ವಾಹನದಲ್ಲಿ ಗೋವು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಸರಿಯಾದ ಕ್ರಮವನ್ನೇ ಅನುಸರಿಸಿದ್ದಾರೆ. ಸುಬ್ರಹ್ಮಣ್ಯ ಸೇರಿದಂತೆ ಆ ಭಾಗದಿಂದ ಹೊರ ಜಿಲ್ಲೆಗಳಿಗೆ ಅಕ್ರಮ ಗೋವುಗಳ ಸಾಗಾಟ ನಡೆಯುತ್ತಲೇ ಇರುತ್ತದೆ. ದಾಖಲೆಗಳು ಇಲ್ಲದೇ, ಅನುಮತಿ ಪಡೆಯದೇ ಸಾಗಾಟ ಮಾಡುತ್ತಿರುವುದರಿಂದ ಅಕ್ರಮ ಹೆಚ್ಚಾಗುತ್ತದೆ ಎನ್ನುವುದು ನಮ್ಮ ಕಳವಳ ಎಂದರು.
ಸರಕಾರ ಕ್ರಮ ಕೈಗೊಳ್ಳಲಿ:
ದಾಖಲೆಗಳನ್ನು ಮಾಡಿಕೊಳ್ಳದೆ ನಿಯಮಗಳನ್ನು ಪಾಲಿಸದೆ ಗೋವುಗಳ ಸಾಗಾಟ ಮಾಡಿ ಪೊಲೀಸರು ಕ್ರಮ ಕೈಗೊಂಡಾಗ ಹೊರ ಜಿಲ್ಲೆಗಳಿಂದ ಬಂದು ಇಲ್ಲಿನ ಎ.ಸಿ. ಕಚೇರಿ ಎದುರು ಪ್ರತಿಭಟನೆ ಮಾಡುವುದು ಸರಿಯಲ್ಲ. ಇವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೋಹನ್‌ದಾಸ್ ಆಗ್ರಹಿಸಿದರು.
ಗೋವುಗಳನ್ನು ತಡೆದು ಅನಂತರ ಹಣ ಪಡೆದುಕೊಂಡಿರುವ ಆರೋಪದ ಕುರಿತು, ಗೋವುಗಳನ್ನು ತಡೆದು ಬಳಿಕ ಆಹಾರ ನೀಡದೆ ಇರುವುದು. ಪೊಲೀಸ್ ಎಫ್‌ಐಆರ್‌ನಲ್ಲಿ ಹಾಲು ಕರೆಯುವ ಹಾಗೂ ಗಬ್ಬದ ಗೋವನ್ನು ಮಾಂಸಕ್ಕಾಗಿ ಕೊಂಡೊಯ್ಯಲಾಗುತ್ತಿತ್ತು ಎನ್ನುವ ಏಕಪಕ್ಷೀಯ ಉಲ್ಲೇಖದ ಕುರಿತ ಮಾಧ್ಯಮಗಳ ಪ್ರಶ್ನೆಗಳಿಗೆ ಈ ಕುರಿತು ಮಾಹಿತಿ ಇಲ್ಲ ಎನ್ನುವ ಉತ್ತರ ಲಭಿಸಿತು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಮುಖಂಡರಾದ ದಿನೇಶ್ ಪಂಜಿಗ, ಶ್ರೀಧರ್ ತೆಂಕಿಲ, ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆಮ್ಮಾಯಿ ಉಪಸ್ಥಿತರಿದ್ದರು.