ಅಂತರರಾಷ್ಟ್ರೀಯ ಆಯೋಜನೆಗೆ ಆಳ್ವಾಸ್ ಸಮರ್ಥ: ಕೋಟ್ಯಾನ್
ಮೂಡುಬಿದಿರೆ: ‘ಡಾ.ಎಂ. ಮೋಹನ ಆಳ್ವ ನೇತೃತ್ವದ ಆಳ್ವಾಸ್ ತಂಡವು ಮಾದರಿಯಾಗಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸುವಷ್ಟು ಸಶಕ್ತವಾಗಿದೆ. ಈ ಕ್ರೀಡಾಕೂಟ ಯಶಸ್ವಿಯಾಗಿದ್ದು, ಮೂಡುಬಿದಿರೆಗೆ ಇನ್ನಷ್ಟು ಕಾರ್ಯಕ್ರಮಗಳು ಬರಲಿ ಎಂದು ಶಾಸಕ ಉಮಾನಥ ಕೋಟ್ಯಾನ್ ಹೇಳಿದರು.
ಕ್ರೀಡಾಕೂಟದ ವೀಕ್ಷಕರಾದ ಡಾ. ಯು.ವಿ. ಶಂಕರ್ ಮಾತನಾಡಿ, `ಕ್ರೀಡಾ ಕೂಟದ ಯಶಸ್ಸಿಗೆ ಆಳ್ವಾಸ್ ತಂಡಕ್ಕೆ ಅಭಿನಂದನೆ. ಇದು ಆಳ್ವಾಸ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾಧನೆ’ ಎಂದರು.
‘ಕೇವಲ ಈ ಕ್ರೀಡಾಕೂಟ ಮಾತ್ರವಲ್ಲ, ಒಟ್ಟಾರೆ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿರುವ ಡಾ.ಎಂ. ಮೋಹನ ಆಳ್ವ ಅವರಿಗೆ ಭಾರತೀಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಧನ್ಯವಾದ ಸಲ್ಲಿಸುತ್ತದೆ’ ಎಂದರು.
‘ಇದು ನಾನು ನೋಡಿದ ಅತ್ಯುತ್ತಮ ಕ್ರೀಡಾಕೂಟ. ಅಥ್ಲೀಟ್‌ಗಳು ಬಹುತೇಕ ಬಡವರಾಗಿರುತ್ತಾರೆ. ಅವರಿಗೆ ಆಳ್ವರು ಘೋಷಿಸಿದ ನಗದು ಬಹುಮಾನ ದೊಡ್ಡ ಬೆಂಬಲ’ ಎಂದು ಶ್ಲಾಘಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಎಂಸಿಎಸ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮೀನಾಕ್ಷಿ ಆಳ್ವ ಇದ್ದರು. ವಿಜೇತ ತಂಡ ಹಾಗೂ ವೈಯಕ್ತಿಕ ಬಹುಮಾನಗಳನ್ನು ವಿತರಿಸಲಾಯಿತು. ಡಾ. ವಸಂತ ಡಾ.ರಾಮಚಂದ್ರ ಹಾಗೂ ಎ.ಎಲ್. ಮುತ್ತು ಕಾರ್ಯಕ್ರಮ ನಿರೂಪಿಸಿದರು.
ಫಲ ನೀಡಿದ ಎಸ್‌ಡಿಎಟಿ ಶ್ರಮ:
ಕ್ರೀಡಾಕೂಟದಲ್ಲಿ ಮದ್ರಾಸ್ ವಿಶ್ವವಿದ್ಯಾಲಯವು ಸಮಗ್ರ ಪ್ರಶಸ್ತಿ ಪಡೆದರೆ, ತಮಿಳುನಾಡಿನ ಇತರರ ವಿ.ವಿ.ಗಳೂ ಉತ್ತಮ ಸಾಧನೆ ಮಾಡಿದವು. ಈ ಕುರಿತು ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (ಎಸ್‌ಡಿಎಟಿ)ದ ತರಬೇತುದಾರ ವಿನೋದ್ ಕುಮಾರ್ ಪ್ರತಿಕ್ರಿಯಿಸಿ, ‘ತಮಿಳುನಾಡು ಸರ್ಕಾರವು ಎಸ್‌ಡಿಎಟಿ ಮೂಲಕ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಕ್ರೀಡಾಪಟುಗಳನ್ನು ಗುರುತಿಸಿ ಚೆನ್ನೈ ನ ನೆಹರೂ ಕ್ರೀಡಾಂಗಣದಲ್ಲಿ ಅತ್ಯುತ್ತಮ ತರಬೇತಿ ಹಾಗೂ ಆಹಾರ ಮತ್ತು ಹಾಸ್ಟೆಲ್ ನೀಡುತ್ತಿದೆ. ಅಧಿಕೃತ ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಗೆದ್ದವರಿಗೆ ಪ್ರಥಮ-5 ಲಕ್ಷ, ದ್ವಿತೀಯ- 3ಲಕ್ಷ ಹಾಗೂ ತೃತೀಯ 2ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ವಿ.ವಿ. ಸೇರಿದಂತೆ ಪ್ರಮುಖ ಕ್ರೀಡಾಕೂಟಗಳಲ್ಲಿ ಗೆದ್ದವರಿಗೆ ಹಲವಾರು ನಗದು ಬಹುಮಾನಗಳಿವೆ’ ಎಂದು ವಿವರಿಸಿದರು.
ಮಂಗಳೂರು ವಿಶ್ವವಿದ್ಯಾಲಯಕ್ಕೆ 16 ಪದಕ:
ಕ್ರೀಡಾಕೂಟದ ಅಂತಿಮ ದಿನ ಮಂಗಳೂರು ವಿಶ್ವವಿದ್ಯಾಲಯವು ಎರಡು ಚಿನ್ನ ಹಾಗೂ ಒಂದು ಕಂಚು ಗೆದ್ದಿತು. ಒಟ್ಟು ಪದಕ ಪಟ್ಟಿಯಲ್ಲಿ ಆರು ಚಿನ್ನ, ಐದು ಬೆಳ್ಳಿ ಹಾಗೂ ಐದು ಕಂಚು ಸೇರಿದಂತೆ 16 ಪದಕ ಪಡೆಯಿತು.
4* 400 ಮೀಟರ್ಸ್ ಮಿಕ್ಸೆಡ್ ರಿಲೇ: (ಚಿನ್ನ) ಮತ್ತು ಮಹಿಳಾ ವಿಭಾಗದಲ್ಲಿ 10,000 ಮೀಟರ್ಸ್ ಓಟ: ನಿರ್ಮಲಾ(ಚಿನ್ನ), ಹಾಫ್ ಮ್ಯಾರಥಾನ್: ಭಾಗೀರಥಿ (ಚಿನ್ನ), 400 ಮೀ. ಹರ್ಡಲ್ಸ್: ದೀಕ್ಷಿತಾ ರಾಮ ಗೌಡ (ಬೆಳ್ಳಿ), ಲಾಂಗ್ ಜಂಪ್: ಶ್ರೀದೇವಿಕಾ ವಿ.ಎಸ್. (ಬೆಳ್ಳಿ), 4*400 ಮೀ.ರಿಲೇ: ಮಂಗಳೂರು ವಿ.ವಿ. (ಕಂಚು) ಹಾಗೂ ಪುರುಷರ ವಿಭಾಗದಲ್ಲಿ ಹ್ಯಾಮರ್ ಥ್ರೋ: ಮಹಮ್ಮದ್ ನದೀಂ (ಚಿನ್ನ), 4*400 ಮೀ. ರಿಲೇ: ಸಾಕೇತ್, ಕೇಶವನ್, ಪ್ರಥಮೇಶ್ ಹಾಗೂ ಆಕಾಶ್ ರಾಜ್-ತಂಡ (ಚಿನ್ನ), ಡಿಸ್ಕಸ್ ಥ್ರೋ: ಉಜ್ವಲ್ ಚೌಧರಿ(ಚಿನ್ನ), ನಾಗೇಂದ್ರ ಅಣ್ಣಪ್ಪ ನಾಯ್ಕ(ಕಂಚು), 100 ಮೀ. ಓಟ: ವಿಭಾಸ್ಕರ್ ಕುಮಾರ್ (ಬೆಳ್ಳಿ), 400 ಮೀ. ಹರ್ಡಲ್ಸ್: ಆರ್ಯನ್ ಪ್ರಜ್ವಲ್ ಕಶ್ಯಪ್ (ಬೆಳ್ಳಿ), 800 ಮೀ. ಓಟ: ಪ್ರಥಮೇಶ್ ಅಮರಿಸ್ಲಾ ದಿಯೋರಾ (ಬೆಳ್ಳಿ), ಶಾಟ್‌ಪುಟ್: ಅನಿಕೇತ್ (ಕಂಚು), ಡೆಕಥ್ಲಾನ್: ಚಮನ್‌ಜ್ಯೋತ್ ಸಿಂಗ್ (ಕಂಚು), 400 ಮೀಟರ್ಸ್ ಓಟ: ಆಕಾಶ್ ರಾಜ್ ಎಸ್.ಎಂ. (ಕಂಚು) ಸ್ಥಾನ ಪಡೆದಿದ್ದಾರೆ.

