ಪಾಲಡ್ಕ ಗ್ರಾಮ ಪಂಚಾಯತ್ ಮಕ್ಕಳ ಗ್ರಾಮಸಭೆ: ಕೊಠಡಿ, ಶೌಚಾಲಯ, ಗ್ರಂಥಾಲಯಕ್ಕೆ ಪುಸ್ತಕಗಳ ಬೇಡಿಕೆ
ಕಡಂದಲೆ ಪಲ್ಕೆ ಗಣೇಶ್ ದರ್ಶನ್ ಸಭಾಭವನದಲ್ಲಿ ವಿದ್ಯಾಥಿ೯ ನಾಯಕ ಭವಿಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿರುವ ಸಮಸ್ಯೆಗಳ ಬಗ್ಗೆ ಪಂಚಾಯತ್ ಗಮನಕ್ಕೆ ತಂದರು.
ಕಡಂದಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿಯ ವಿದ್ಯಾರ್ಥಿಗಳು ಶೌಚಾಲಯ ನಿರ್ಮಾಣ, ಹೆಚ್ಚುವರಿ ಕೊಠಡಿ ವ್ಯವಸ್ಥೆ ಹಾಗೂ ಕಂಪ್ಯೂಟರ್–ಪ್ರಿಂಟರ್ ಒದಗಿಸುವಂತೆ ಮನವಿ ಮಾಡಿದರು. ಕಡಂದಲೆ ಸರ್ಕಾರಿ ಹಿರಿಯ ಪ್ರಾಥಮಿಕ ಮೈನ್ ಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಮುಂದಿಟ್ಟರು.
ಪಾಲಡ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಮಾರು ವಿದ್ಯಾರ್ಥಿಗಳು ಶಾಲಾ ವಠಾರಕ್ಕೆ ನಾಮಫಲಕ ಅಳವಡಿಕೆ, ಹ್ಯಾಂಡ್ವಾಶ್ ವ್ಯವಸ್ಥೆ ಹಾಗೂ ಆಟದ ಮೈದಾನ ಕಲ್ಪಿಸುವಂತೆ ಒತ್ತಾಯಿಸಿದರು. ಇದೇ ವೇಳೆ ಕಡಂದಲೆ ಸುಬ್ರಹ್ಮಣ್ಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೆಚ್ಚುವರಿ ಪುಸ್ತಕಗಳು ಹಾಗೂ ಇನ್ಸುಲೇಟರ್ ವ್ಯವಸ್ಥೆ ಒದಗಿಸುವಂತೆ ಕೋರಿದರು.
ಸಭೆಯಲ್ಲಿ ಪಂಚಾಯತ್ ಅಧ್ಯಕ್ಷೆ ಅಮಿತಾ ನಾಯ್ಕ, ಉಪಾಧ್ಯಕ್ಷ ಪ್ರವೀಣ್ ಸೀಕ್ವೆರಾ, ಪಂಚಾಯತ್ ಸದಸ್ಯರು, ಶಿಕ್ಷಣ ಇಲಾಖೆಯ ರಾಜೇಶ್ವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀಣಾ, ಪಾಲಡ್ಕ ಆರೋಗ್ಯ ಇಲಾಖೆಯ ಪ್ರಾಧ್ಯಾಪಕರಾದ ಶ್ವೇತಾ, ಸಂಪನ್ಮೂಲ ವ್ಯಕ್ತಿ ಸುಧಾಕರ್ ಪೊಸ್ರಾಲ್, ಪಂಚಾಯತ್ ಕಾರ್ಯದರ್ಶಿ ಮೋಹಿನಿ ಶೆಟ್ಟಿ, ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳ ಹುನಗುಂದ ಕಾಯ೯ಕ್ರಮ ನಿರೂಪಿಸಿದರು. ವಿದ್ಯಾಥಿ೯ಗಳಾದ ಕಸ್ವಿ ಸ್ವಾಗತಿಸಿದರು. ಸಮೀಕ್ಷಾ ಧನ್ಯವಾದ ಸಲ್ಲಿಸಿದರು.