ಹಿಂದೂ ಸಂಗಮದ ಮೂಲಕ ರಾಷ್ಟ್ರೀಯತೆಯನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಉದ್ದೇಶ: ತಾರನಾಥ ಕೊಟ್ಟಾರಿ
ನಮ್ಮನ್ನು ಜಾತಿ ಹಾಗೂ ಪಕ್ಷಗಳ ಮೂಲಕ ವಿಭಜಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಎಲ್ಲ ಸವಾಲುಗಳಿಗೆ ಉತ್ತರ ಒಂದೇ — ಹಿಂದೂ ಸಮಾಜ ಜಾತಿ–ಮತ ಭೇದ ಮರೆತು ಜಾಗೃತವಾಗಬೇಕು ಎಂದು ಕರೆ ನೀಡಿದರು.
ಸಾಮರಸ್ಯದ ಭಾವನೆ ಅತ್ಯಂತ ಅಗತ್ಯವಾಗಿದ್ದು, ಇಂದು ಅದು ಕುಂಠಿತವಾಗುತ್ತಿದೆ. ನಮ್ಮೊಳಗೆ ಕಂದಕ ನಿರ್ಮಿಸುವ ಷಡ್ಯಂತ್ರಗಳು ನಡೆಯುತ್ತಿವೆ. ನಾಗರಿಕ ಶಿಷ್ಟಾಚಾರವನ್ನು ಪಾಲಿಸಿ, ನಮ್ಮ ತಪ್ಪುಗಳನ್ನು ವಿಮರ್ಶಿಸಿ ಸ್ವಯಂ ಸರಿಪಡಿಸಿಕೊಳ್ಳುವ ಮನೋಭಾವ ಬೆಳೆಸಬೇಕೆಂದು ಅವರು ಹೇಳಿದರು.
ವಕೀಲ ಶರತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, “ಸನಾತನ ಹಿಂದೂ ಧರ್ಮದ ವೇದಗಳು, ಮಹಾಭಾರತ, ರಾಮಾಯಣ, ಭಗವದ್ಗೀತೆಗಳಲ್ಲಿನ ಯಥೋ ಧರ್ಮಃ ತಥೋ ಜಯಃ, ಸತ್ಯಮೇವ ಜಯತೇ ಎಂಬ ಧ್ಯೇಯ ವಾಕ್ಯಗಳನ್ನು ನಮ್ಮ ಸಂವಿಧಾನ, ಸಂಸತ್ತು ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಅಳವಡಿಸಿಕೊಂಡಿರುವುದು ಸನಾತನ ಧರ್ಮದ ಹಿರಿಮೆಯ ಪ್ರತೀಕವಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಮನೋಜ್ ಶೆಣೈ, ಪಟ್ಟಣಶೆಟ್ಟಿ ಸುದೇಶ್ ಜೈನ್, ಕೋಟಬಾಗಿಲು ದೇವಸ್ಥಾನದ ಮೊಕ್ತೇಸರ ವಿಶ್ವನಾಥ ಹೆಗ್ಡೆ, ಮಣಿಕಂಠ ಕ್ಷೇತ್ರದ ಪ್ರಧಾನ ಅರ್ಚಕ ಶಿವಾನಂದ ಶಾಂತಿ, ಗೌರಿಕೆರೆ ರಾಮಮಂದಿರದ ವಿಶ್ವನಾಥ ದೇವಾಡಿಗ, ವಿಶ್ವಕರ್ಮ ಸಮಾಜದ ಶಿವರಾಮ ಆಚಾರ್, ಮಾರಿಗುಡಿ ಅರ್ಚಕ ಸುಂದರ ಬೋವಿ ಉಪಸ್ಥಿತರಿದ್ದರು.
ಸ್ವಾತಿ ಬೋರ್ಕರ್ ಅವರು ವಂದೇ ಮಾತರಂ ಗೀತೆಯನ್ನು ಹಾಡಿದರು. ಶಾಂತಾರಾಮ ಕುಡ್ವ ಸ್ವಾಗತಿಸಿದರು. ಜಗದೀಶ ಆಚಾರ್ಯ ವಂದನಾರ್ಪಣೆ ಹಾಗೂ ಶಾಂತಿ ಮಂತ್ರ ಪಠಣ ನೆರವೇರಿಸಿದರು. ಶಾಂತಾರಾಮ ಕುಡ್ವ ಹಾಗೂ ಸೀತಾರಾಮ ಆಚಾರ್ಯ ನಿರೂಪಿಸಿದರು.

