ತುಳು ರಂಗಭೂಮಿ ಕಲಾವಿದೆ 'ಅಬ್ಬಕ್ಕ ಪ್ರೇರಣಾ ಗೌರವ'ಕ್ಕೆ ಸಪ್ನಾ ಕೋಟ್ಯಾನ್ ಆಯ್ಕೆ
Sunday, January 18, 2026
ಮೂಡುಬಿದಿರೆ: ತುಳು ರಂಗಭೂಮಿಯ ಉದಯೋನ್ಮುಖ ಕಲಾವಿದೆ ಸಪ್ನಾ ಎಸ್. ಕೋಟ್ಯಾನ್ ಅವರು 'ಜವನೆರ್ ಬೆದ್ರ' ಸಂಘಟನೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ 'ಅಬ್ಬಕ್ಕ ಪ್ರೇರಣಾ ಗೌರವ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವೀರರಾಣಿ ಅಬ್ಬಕ್ಕನ 500ನೇ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಈ ಗೌರವವನ್ನು ಅವರಿಗೆ ನೀಡಿ ಗೌರವಿಸಲಿದೆ.
ತುಳು ನಾಟಕರಂಗದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಸಪ್ನಾ ಅವರು ಇದುವರೆಗೆ 150ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೆ, ಉತ್ತಮ ನಿರೂಪಕಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಅವರು, ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಯುವ ಪೀಳಿಗೆಗೆ ಮಾದರಿಯಾಗಿದೆ. ಇವರ ಈ ಸಾಧನೆಯನ್ನು ಗುರುತಿಸಿ 'ಜವನೆರ್ ಬೆದ್ರ' ಸಂಘಟನೆಯು ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.