ಸವಣೂರು ಸೀತಾರಾಮ ರೈ ಸಹಕಾರಿ ಕ್ಷೇತ್ರದ ‘ನಕ್ಷತ್ರ’: ನಳಿನ್ ಕುಮಾರ್ ಕಟೀಲ್
ಶನಿವಾರ ಈಶ್ವರಮಂಗಲದ ಗಣೇಶ್ ಕಾಂಪ್ಲೆಕ್ಸ್‌ನಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ 17ನೇ ಶಾಖೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ಸಿಂಹಪಾಲು ಸಹಕಾರಿ ಕ್ಷೇತ್ರದ್ದಾಗಿದೆ. ಆರ್ಥಿಕ ಸದೃಢತೆಯ ಚಿಂತನೆಯನ್ನು ಗ್ರಾಮೀಣ ಜನತೆಯಲ್ಲಿ ಹುಟ್ಟಿಸಿದ್ದೇ ಈ ಸಹಕಾರಿ ಕ್ಷೇತ್ರ. ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ತನ್ನ ದೂರದೃಷ್ಟಿತ್ವ ಹಾಗೂ ಶಿಸ್ತು ಪಾಲನೆ ಮೂಲಕ ಸಹಕಾರಿ ಕ್ಷೇತ್ರ ಗಟ್ಟಿಯಾದ ತಾಣವಾಗಿದೆ. ಇದರ ಜತೆಗೆ ಜನಸಾಮಾನ್ಯರಿಗೆ ತಮ್ಮ ಸಹಕಾರಿ ಸಂಘದಲ್ಲಿ ಉದ್ಯೋಗ ನೀಡುವ ಮೂಲಕ ಸವಣೂರು ಸೀತಾರಾಮ ರೈ ಅವರು ಇತರ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ. ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡುವ ಜತೆಗೆ ಶೈಕ್ಷಣಿಕ ವ್ಯವಸ್ಥೆಯನ್ನು ಸೃಷ್ಟಿಸಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣದ ಕನಸನ್ನು ನನಸು ಮಾಡಿದ್ದಾರೆ ಎಂದವರು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ರತ್ನ ಕೆ.ಸವಣೂರು ಸೀತಾರಾಮ ರೈ ಅವರು ಸಹಕಾರಿ ಕ್ಷೇತ್ರ ನನ್ನ ಪ್ರೀತಿಯ ಕ್ಷೇತ್ರ. ಇಂದು ಈ ಸಹಕಾರಿ ಕ್ಷೇತ್ರ ದೇಶಕ್ಕೆ ಶೇ.೩೩ರಷ್ಟು ಪಾಲು ನೀಡುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘಗಳ ಮುಖ್ಯ ಕಚೇರಿಯನ್ನು ೫ ಕೋಟಿ ವೆಚ್ಚದಲ್ಲಿ ಸವಣೂರಿನಲ್ಲಿ ನಿರ್ಮಿಸಿ ಅದರಲ್ಲಿಯೇ ಸಭಾಂಗಣದ ವ್ಯವಸ್ಥೆ ಮಾಡಲಾಗುತ್ತದೆ. ಈ ಭಾಗದ ಜನತೆ ತಮ್ಮ ಶುಭ ಕಾರ್ಯಕ್ರಮಗಳನ್ನು ಇಲ್ಲಿಯೇ ನಡೆಸಲು ಅವಕಾಶವಾಗಲಿದೆ. ನಮ್ಮ ಸಂಸ್ಥೆ ಹುಟ್ಟಿನೊಂದಿಗೇ ಎ ತರಗತಿಯನ್ನು ಕಾಯ್ದುಕೊಂಡಿದ್ದು, ನಿರಂತರವಾಗಿ ಸದಸ್ಯರಿಗೆ ಉತ್ತಮ ಡಿವಿಡೆಂಟ್ ನೀಡುತ್ತಾ ಬಂದಿದೆ. ಈ ವರ್ಷ ಶೇ.೧೮ ಡಿವಿಡೆಂಟ್ ನೀಡಲಾಗುವುದು ಎಂದವರು ತಿಳಿಸಿದರು.
ಭದ್ರತಾ ಕೊಠಡಿಯನ್ನು ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಕಂಪ್ಯೂಟರ್ ವ್ಯವಸ್ಥೆಯನ್ನು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಉದ್ಘಾಟಿಸಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಅವರು ಮಾತನಾಡಿ ಶುಭ ಹಾರೈಸಿದರು. ಈಶ್ವರಮಂಗಲದ ಶ್ರೀಗಣೇಶ್ ಕಾಂಪ್ಲೆಕ್ಸ್ ಮಾಲಕ ಗಣೇಶ್ ರೈ ಮುಳಿಪಡ್ಪು ಮುಖ್ಯ ಅತಿಥಿಯಾಗಿದ್ದರು.
ಬಾಲ್ ಬ್ಯಾಡ್ಮಿಂಟನ್ ರಾಷ್ಟ್ರೀಯ ಮಹಿಳಾ ತಂಡದ ನಾಯಕಿಯಾಗಿ ಬಿಹಾರದ ಪಾಟ್ನಾದಲ್ಲಿ ನಡೆದ ದಕ್ಷಿಣ ಏಷ್ಯಾ ಮಹಿಳಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಪಾಂಡೇಶ್ವರ ಶಾಖೆಯ ಸಿಬ್ಬಂದಿಯಾದ ಕಡೇಶಿವಾಲಯದ ಜಯಲಕ್ಷ್ಮಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸಂಘದ ನಿರ್ದೇಶಕರಾದ ಅಶ್ವಿನ್ ಎಲ್. ಶೆಟ್ಟಿ, ಜಯಪ್ರಕಾಶ್ ರೈ ಸುಳ್ಯ, ಎಸ್.ಎಂ. ಬಾಪು ಸಾಹೇಬ್ ಸುಳ್ಯ, ಕೆ.ರವೀಂದ್ರ ರೈ ಕೇನ್ಯ, ವಿ.ವಿ. ನಾರಾಯಣ ಭಟ್ ನರಿಮೊಗರು, ರಶ್ಮಿ ಎಸ್. ರೈ ಅತಿಥಿಗಳನ್ನು ಗೌರವಿಸಿದರು. ಸುಳ್ಯ ಶಾಖೆಯ ಪ್ರಿಯಾ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕಿ ರಕ್ಷಾ ಡಿ.ಜೆ. ವಂದಿಸಿದರು. ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ ಮತ್ತು ಪಾಂಡೇಶ್ವರ ಶಾಖೆಯ ಪ್ರಭಾರ ವ್ಯವಸ್ಥಾಪಕಿ ಮಹಾಲಕ್ಷ್ಮಿ ನಿರೂಪಿಸಿದರು.