ಕೊಂಕಣ ರೈಲ್ವೆ: ಡಿಸೆಂಬರ್‌ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ 2.45 ಕೋಟಿ ರೂ. ದಂಡ ವಸೂಲಿ

ಕೊಂಕಣ ರೈಲ್ವೆ: ಡಿಸೆಂಬರ್‌ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ 2.45 ಕೋಟಿ ರೂ. ದಂಡ ವಸೂಲಿ

ಮಂಗಳೂರು: ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಗೆ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ಅಭಿಯಾನವನ್ನು ಕೈಗೊಂಡಿರುವ ಕೊಂಕಣ ರೈಲ್ವೆ ನಿಗಮ ಕಳೆದ ಡಿಸೆಂಬರ್ ತಿಂಗಳಿನಲ್ಲಿ 2.45 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದೆ. ನವೆಂಬರ್‌ನಲ್ಲಿ ಅದು 2.33 ಕೋಟಿ ರೂ.ಗಳನ್ನು ದಂಡವಾಗಿ ಸಂಗ್ರಹಿಸಿತ್ತು.

ಡಿಸೆಂಬರ್ ತಿಂಗಳೊಂದರಲ್ಲೇ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆಸಿದ 998 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾಚರಣೆಯಲ್ಲಿ ಒಟ್ಟು 43,896 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿರುವ ಸಿಬ್ಬಂದಿಗಳು ಅವರಿಂದ 2.45 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

2025ನೇ ಸಾಲಿನ ಇಡೀ ವರ್ಷದಲ್ಲಿ ಅಂದರೆ ಜನವರಿ ತಿಂಗಳಿನಿಂದ ಡಿಸೆಂಬರ್ ತಿಂಗಳ ಕೊನೆಯವರೆಗೆ ಒಟ್ಟು 8,481 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 3,68,901 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿ ಅವರಿಂದ ದಂಡದ ರೂಪದಲ್ಲಿ ಒಟ್ಟು 20.27 ಕೋಟಿ ರೂ. ಹಣವನ್ನು ರೈಲ್ವೆ ಖಜಾನೆಗೆ ಸಂಗ್ರಹಿಸಲಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೊಂಕಣ ರೈಲ್ವೆ ಮಾರ್ಗದಲ್ಲಿ ಈ ವಿಶೇಷ ಕಾರ್ಯಾಚರಣೆಯನ್ನು ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಗಳ ನೆರವಿನಿಂದ ರೈಲುಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ಇದರಲ್ಲಿ ಸಂಚರಿಸುವ ಪ್ರಯಾಣಿಕರು ಅಧಿಕೃತವಾದ ಟಿಕೆಟ್ ಖರೀದಿಸಿ ಪ್ರಯಾಣಿಸುವಂತೆ ವಿನಂತಿಸಿದ್ದಾರೆ.

ಈ ಮೂಲಕ ಕೆಆರ್‌ಸಿಎಲ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಗುವ ಯಾವುದೇ ರೀತಿಯ ತೊಂದರೆಯನ್ನು ತಪ್ಪಿಸುವಂತೆ ರೈಲ್ವೆ ಅಧಿಕಾರಿಗಳು ವಿನಂತಿಸಿದ್ದಾರೆ. ಇನ್ನು ಮುಂದೆಯೂ ಕೊಂಕಣ ರೈಲ್ವೆಯ ಎಲ್ಲಾ ಮಾರ್ಗ ಗಳಲ್ಲೂ ಟಿಕೆಟ್ ತಪಾಸಣಾ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರವಾಗಿ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article