ಗಂಡ-ಹೆಂಡತಿ ನಡುವೆ ಕಲಹ: ನ್ಯಾಯಾಧೀಶರ ಮುಂದೆಯೇ ಆತ್ಮಹತ್ಯೆ ಯತ್ನ
ಪುತ್ತೂರಿನ ಕಾವು ಮಣಿಯಡ್ಕ ಎಂಬಲ್ಲಿನ ನಿವಾಸಿ ರವಿ (35) ನ್ಯಾಯಾಧೀಶರ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿ ವ್ಯಕ್ತಿ.
ಕಳೆದ ಎರಡು ದಿನಗಳ ಹಿಂದೆ ಈತ ತನ್ನ ಪತ್ನಿ ವಿದ್ಯಾಶ್ರೀ ಜತೆಗೆ ಗಲಾಟೆ ಮಾಡಿ ಆಕೆಯ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಸಂಪ್ಯಠಾಣೆಗೆ ದೂರು ನೀಡಲಾಗಿತ್ತು. ಹಾಗಾಗಿ ಈ ಗಂಡ ಹೆಂಡತಿಯ ಕಲಹ ಪ್ರಕರಣ ಠಾಣೆಯ ಮೆಟ್ಟಲೇರಿತ್ತು. ಇದರ ಜತೆಗೆ ಇವರಿಬ್ಬರ ನಡುವೆ ವಿಚ್ಛೇದನದ ಮಾತುಕತೆಯೂ ನಡೆದಿತ್ತು ಎಂದು ತಿಳಿದು ಬಂದಿದೆ. ಈ ಕಲಹ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಕೇಸ್ ದಾಖಲಿಸುವ ಸಾಧ್ಯತೆ ಇದ್ದು, ವಿಚಾರಣೆಗಾಗಿ ಈತನನ್ನು ಸಂಪ್ಯಠಾಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದರು.
ಆದರೆ ಸಂಪ್ಯಠಾಣೆಗೆ ಹಾಜರಾಗಬೇಕಾಗಿದ್ದ ರವಿ ಅಲ್ಲಿಗೆ ಹೋಗದೆ ಪುತ್ತೂರು 5ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಬಂದು ನ್ಯಾಯಾಧೀಶರ ಮುಂದೆಯೇ ಎಂಡೋಸಲ್ಫಾನ್ ನಿಷೇಧದ ಬಳಿಕ ಮಾರುಕಟ್ಟೆಗೆ ಬಂದಿರುವ ಕರಾಟೆ ಎಂಬ ಕೀಟನಾಶಕವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ವ್ಯಕ್ತಿ ನ್ಯಾಯಾಲಯದ ಆವರಣದೊಳಗೆ ಬರುತ್ತಿದ್ದಂತೆ ತನ್ನ ಕಿಸೆಯಿಂದ ಯಾವುದೋ ಬಾಟಲಿಯನ್ನು ತೆಗೆಯುತ್ತಿರುವುದನ್ನು ಗಮನಿಸಿದ ನ್ಯಾಯಾಧೀಶರು ತಮ್ಮ ಸಿಬಂದಿಗಳಿಗೆ ಆತ ಏನೋ ಮಾಡುತ್ತಿದ್ದಾನೆ ನೋಡಿ ಎಂದು ಸೂಚನೆ ನೀಡಿದರು. ಆದರೆ ಆಗಲೇ ತಕ್ಷಣ ಕೀಟನಾಶಕ ಸೇವಿಸಿದ ಆತ ನ್ಯಾಯಾಲಯದಲ್ಲಿಯೇ ವಾಂತಿ ಮಾಡಿದ್ದಾನೆ. ತಕ್ಷಣ ಎಚ್ಚೆತ್ತ ಅಲ್ಲಿದ್ದವರು ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೀಟನಾಶಕ ಸೇವಿಸಿದ ರವಿ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಒಯ್ಯಲಾಗಿದೆ.
ಈ ಆತ್ಮಹತ್ಯೆ ಯತ್ನದ ಬಳಿಕ ದಂಪತಿಗಳು ಒಂದಾಗಿದ್ದು, ರವಿಯನ್ನು ಮಂಗಳೂರಿಗೆ ಸಾಗಿಸುವ ಆಂಬುಲೆನ್ಸ್ ನಲ್ಲಿಯೇ ಆತನ ಪತ್ನಿ ವಿದ್ಯಾಶ್ರೀ ಕೂಡಾ ತೆರಳಿದ್ದಾಳೆ.