ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರ
Saturday, January 24, 2026
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ರಕ್ಷಕ-ಶಿಕ್ಷಕ ಸಂಘ ಇದರ ಆಶ್ರಯದಲ್ಲಿ ಜ.17 ಹಾಗೂ 24 ರಂದು ಕಾಲೇಜು ಸಭಾಂಗಣದಲ್ಲಿ ಮುಂಬರುವ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳ ತಯಾರಿ ನಡೆಸುವಲ್ಲಿ ವಿದ್ಯಾರ್ಥಿಗಳ, ಪೋಷಕರ ಹಾಗೂ ಶಿಕ್ಷಕರ ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಸಮಾಲೋಚನೆ ಮತ್ತು ಮಾಹಿತಿ ಸಭೆ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಬದುಕಿನ ಅತ್ಯಂತ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ನಂಬಿಕೆ ಅತ್ಯಂತ ಮುಖ್ಯ. ಮಕ್ಕಳ ಪರೀಕ್ಷಾ ತಯಾರಿ ಸಂದರ್ಭದಲ್ಲಿ ಅವರಿಗೆ ಸಾತ್ವಿಕ ಆಹಾರವನ್ನು ನೀಡುವುದರ ಜೊತೆಗೆ ಮನೆಯಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ವಿದ್ಯಾರ್ಥಿಗಳು ಕೂಡ ಇಷ್ಟ ಪಟ್ಟು ಅಧ್ಯಯನ ನಡೆಸಬೇಕು. ಇಂದು ವಿದ್ಯಾರ್ಥಿಗಳು ಹಾಕುವ ಶ್ರಮ ಮುಂದಿನ ಜೀವನಕ್ಕೆ ನಾಂದಿಯಾಗಿರುತ್ತದೆ. ಹಾಗಾಗಿ ಶ್ರಮ ವಹಿಸಿ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ನಡೆಸಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ, ಹೆತ್ತವರು ವಿದ್ಯಾರ್ಥಿಗಳ ಕಡೆಗೆ ಯಾವ ರೀತಿ ಗಮನ ಹರಿಸಬೇಕು ಎಂಬುದರ ಕುರಿತು ಮಾತನಾಡಿ ಶುಭ ಹಾರೈಸಿದರು.
ಕಾಲೇಜಿನ ಬೋಧಕ/ಬೋಧಕೇತರ ವರ್ಗ ದ್ವಿತೀಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಹೆತ್ತವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ರಕ್ಷಕ-ಶಿಕ್ಷಕ ಸಂಘದ ನಿರ್ದೇಶಕ ಸಂಜಯ್ ಎಸ್. ಸ್ವಾಗತಿಸಿದರು. ಅಶ್ವಿನಿ ಕೆ. ವಂದಿಸಿ, ಉಪನ್ಯಾಸಕಿ ಉಷಾ ಎ. ಕಾರ್ಯಕ್ರಮ ನಿರೂಪಿಸಿದರು.

