ಪ್ರಾಥಮಿಕ ಆರೋಗ್ಯ ಕೇಂದ್ರ ಉಳಿಸಲು ಗ್ರಾಮಸ್ಥರ ಒತ್ತಾಯ
‘ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗುತ್ತಿಗಾರು ಸರ್ಕಾರಿ ಆರೋಗ್ಯ ಕೇಂದ್ರದೊಂದಿಗೆ ವಿಲೀನಗೊಳಿಸುವ ಪ್ರಯತ್ನವನ್ನು ವಿರೋಧಿಸುತ್ತೇವೆ’ ಎಂಬ ವಾಖ್ಯದೊಂದಿಗೆ ಗ್ರಾಮಸ್ಥರು ಈ ಕುರಿತು ಮುಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಸಚಿವರುಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಪಳ್ಳತ್ತಡ್ಕ ಹಾಗೂ ಬಾಳುಗೋಡು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರಿಗೆ ಸಹಕಾರಿಯಾಗುವಂತೆ ಕೊಲ್ಲಮೊಗ್ರದಲ್ಲಿ ಸುಸಜ್ಜಿತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಎಲ್ಲಾ ರೀತಿಯ ವ್ಯವಸ್ಥೆಗಳಿದ್ದರೂ ಕೂಡ ಅಲ್ಲಿ ಖಾಯಂ ಅಥವಾ ಪರ್ಮನೆಂಟ್ ವೈದ್ಯಾಧಿಕಾರಿಗಳಿಲ್ಲದೇ ಸಾರ್ವಜನಿಕರು ನಿರಂತರ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಲದೀಪ್.ಎಂ.ಡಿ. ಅವರು ಸರ್ಕಾರ ಆರು ತಿಂಗಳುಗಳಿಂದ ವೇತನ ಪಾವತಿ ಮಾಡದೇ ಇರುವ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಸರ್ಕಾರದ ಆದೇಶದಂತೆ ಒಂದು ತಿಂಗಳವರೆಗೆ ನೋಟೀಸ್ ಪಿರಿಯೆಡ್ ಮೂಲಕ ಕರ್ತವ್ಯ ನಿರ್ವಹಿಸಿ ಜ.17ರಂದು ಕೊನೆಯ ಕರ್ತವ್ಯ ದಿನವನ್ನು ಪೂರೈಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಜ.10 ರಂದು ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಪಳ್ಳತ್ತಡ್ಕ ಹಾಗೂ ಬಾಳುಗೋಡು ಸೇರಿದಂತೆ ನಾಲ್ಕು ಗ್ರಾಮಗಳ ಗ್ರಾಮಸ್ಥರು ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ಸಮಾಲೋಚನಾ ಸಭೆ ನಡೆಸಿದ್ದು, ಸಭೆಯಲ್ಲಿ “ವೈದ್ಯಾಧಿಕಾರಿಗಳು ರಾಜೀನಾಮೆ ನೀಡಿದ ನಂತರ ಸಂಬಂಧಪಟ್ಟ ಇಲಾಖೆ ಆರೋಗ್ಯ ಕೇಂದ್ರಕ್ಕೆ ಹೊಸ ವೈದ್ಯಾಧಿಕಾರಿಗಳನ್ನು ನೇಮಕ ಮಾಡದೇ ಇರುವ ಬಗ್ಗೆ, ಕೊಲ್ಲಮೊಗ್ರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗುತ್ತಿಗಾರು ಸರ್ಕಾರಿ ಆರೋಗ್ಯ ಕೇಂದ್ರದೊಂದಿಗೆ ವಿಲೀನಗೊಳಿಸುವ ಪ್ರಯತ್ನದ ಬಗ್ಗೆ ಹಾಗೂ ಈ ಎಲ್ಲಾ ವಿಷಯಗಳ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಸರಿಯಾದ ಮಾಹಿತಿ ಸಿಗದೇ ಇರುವ ಬಗ್ಗೆ ಹಾಗೂ ಈ ಕುರಿತು ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ’ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದ್ದು, ಸಭೆಯಲ್ಲಿ ‘ಮುಂದಿನ ಮೂರು ದಿನಗಳ ಒಳಗೆ ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ ಹಾಗೂ ಮಡಪ್ಪಾಡಿ ಗ್ರಾಮ ಪಂಚಾಯತ್ ಗಳಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಮಾಡುವುದು ಹಾಗೂ ಗ್ರಾಮಸ್ಥರ ಸಹಿ ಸಂಗ್ರಹಿಸಿ ಆ ಮೂಲಕ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಕೆ ಮಾಡುವುದು ಎಂದು ತೀರ್ಮಾನಿಸಲಾಗಿದ್ದು, ಹಾಗೆಯೇ ಈ ಪ್ರಯತ್ನಗಳಿಂದ ಯಾವುದೇ ಪ್ರಯೋಜನವಾಗದೇ ಇದ್ದಲ್ಲಿ ಸಾರ್ವಜನಿಕ ತುರ್ತು ಸಭೆ ನಡೆಸಿ ಕೊಲ್ಲಮೊಗ್ರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗಳನ್ನು ನೇಮಿಸಲು ಆಗ್ರಹಿಸಿ ಹಾಗೂ ಕೊಲ್ಲಮೊಗ್ರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗುತ್ತಿಗಾರು ಸರ್ಕಾರಿ ಆರೋಗ್ಯ ಕೇಂದ್ರದೊಂದಿಗೆ ವಿಲೀನಗೊಳಿಸುವ ಪ್ರಯತ್ನವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಲಾಗಿದೆ’ ಎಂದು ತಿಳಿದುಬಂದಿದೆ.
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಕಟ್ಟ, ಗ್ರಾಮ ಪಂಚಾಯತ್ ಸದಸ್ಯರಾದ ಬಾಲಸುಬ್ರಹ್ಮಣ್ಯ ಭಟ್, ಪುನೀತ್ ಪಡ್ಪು, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಡಾ. ಸೋಮಶೇಖರ್ ಕಟ್ಟೆಮನೆ, ಉಪಾಧ್ಯಕ್ಷ ಗಣೇಶ್ ಭಟ್ ಇಡ್ಯಡ್ಕ, ಪ್ರಮುಖರಾದ ಉದಯ ಶಿವಾಲ, ಹರೀಶ್ ಬಳ್ಳಡ್ಕ, ಶೇಖರ ಅಂಬೆಕಲ್ಲು, ಮಣಿಕಂಠ ಕೊಳಗೆ, ಸತೀಶ್ ಟಿ.ಎನ್., ದಿನೇಶ್ ಮಡ್ತಿಲ, ಚಂದ್ರಶೇಖರ ಕೊಂದಾಳ, ಸುಧಾಮಣಿ ಕುಂಞೇಟಿ ಮತ್ತಿತರರು ಉಪಸ್ಥಿತರಿದ್ದರು.