ಅರಣ್ಯ ಪ್ರದೇಶದಲ್ಲಿ ವಾಸಿಸುವವರಿಗೆ ಹಕ್ಕುಪತ್ರ ಕೊಡಿ: ಶಾಸಕಿ ಭಾಗೀರಥಿ ಮುರುಳ್ಯ
ಸುಳ್ಯ: ಅರಣ್ಯ ಪ್ರದೇಶದಲ್ಲಿ ಹಕ್ಕುಪತ್ರವಿಲ್ಲದೆ ವಾಸಿಸುತ್ತಿರುವ ಕುಟುಂಬಗಳಿಗೆ ಆ ಭೂಮಿಯನ್ನು ಬಿಟ್ಟುಕೊಟ್ಟು ಕಂದಾಯ ಇಲಾಖೆಯಿಂದ ಬದಲಿ ಭೂಮಿ ಮಂಜೂರು ಮಾಡುವಂತೆ ಮತ್ತು ಆನೆ ದಾಳಿಯಿಂದ ಹಾನಿಗೊಳಗಾದ ಕೃಷಿಕರಿಗೆ ಸೂಕ್ತ ಪರಿಹಾರ ಬಿಡುಗಡೆಮಾಡುವಂತೆ ಶಾಸಕಿ ಭಾಗೀರಥಿ ಮುರುಳ್ಯ ಸದನದಲ್ಲಿ ಒತ್ತಾಯ ಮಾಡಿದ್ದಾರೆ.
ಅರಣ್ಯದಲ್ಲಿ ವಾಸಿಸುವವರಿಗೆ ಭೂಮಿ ನೀಡುವ ಕುರಿತು ಇರುವ ಕಾನೂನು ತೊಡಕುಗಳ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಉತ್ತರಿಸಿದರು. ಡೀಮ್ಡ್ ಫಾರೆಸ್ಟ್ ಎಂದು ನಮೂದಾಗಿರುವ ಕಾರಣ ಕಂದಾಯ ಭೂಮಿಯಲ್ಲಿ ಕೃಷಿ ಮಾಡಿದ ಕೃಷಿಕರಿಗೆ ಮನೆ, ಕಟ್ಟಡ ನಿರ್ಮಿಸಿದವರಿಗೆ ಸೇರಿ ಸರಕಾರಿ ಕಟ್ಟಡಕ್ಕೂ ದಾಖಲೆ ನೀಡಲು ಸಮಸ್ಯೆ ಆಗಿದೆ. ಈ ಬಗ್ಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿ ಸಮಸ್ಯೆ ಪರಿಹರಿಸಬೇಕು ಎಂದು ಶಾಸಕರು ಸಭೆಯಲ್ಲಿ ಹೇಳಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಜಂಟಿ ಸಮೀಕ್ಷೆ ನಡೆಸಲು ಆದೇಶ ನೀಡಿದ್ದು ಸಮೀಕ್ಷೆ ನಡೆಯುತಿದೆ ಎಂದು ಹೇಳಿದರು.
ಕಾಡಾನೆ ದಾಳಿಯಿಂದ ಭಾರೀ ಪ್ರಮಾಣದಲ್ಲಿ ಕೃಷಿ ಹಾನಿ ಸಂಭವಿಸಿದ್ದು ಇದಕ್ಕೆ ಪರಿಹಾರ ನೀಡಬೇಕು ಜೊತೆಗೆ ಸರಕಾರವೇ ಶೇ.100 ವೆಚ್ಚ ಭರಿಸಿ ಸೋಲಾರ್ ಬೇಲಿ ನಿರ್ಮಾಣ ಮಾಡಬೇಕು ಎಂದು ಶಾಸಕರು ಒತ್ತಾಯಿಸಿದರು.