ಡ್ರಗ್ಸ್ ನಿಂದ ಜೀವನ, ಕುಟುಂಬ ನಾಶವಾಗುತ್ತದೆ ದೇಶ ಕಟ್ಟುವ ಶಕ್ತಿಗಳಾಗಿ ಯುವ ಸಮಾಜ ಬೆಳೆಯಬೇಕು: ಡಾ. ಭರತ್ ಶೆಟ್ಟಿ

ಡ್ರಗ್ಸ್ ನಿಂದ ಜೀವನ, ಕುಟುಂಬ ನಾಶವಾಗುತ್ತದೆ ದೇಶ ಕಟ್ಟುವ ಶಕ್ತಿಗಳಾಗಿ ಯುವ ಸಮಾಜ ಬೆಳೆಯಬೇಕು: ಡಾ. ಭರತ್ ಶೆಟ್ಟಿ


ಸುರತ್ಕಲ್: ಡ್ರಗ್ಸ್ ಸೇವನೆಯಿಂದ ಒಂದು ಜೀವನ ಸರ್ವನಾಶವಾಗುವುದರ ಜೊತೆಗೆ ಕುಟುಂಬವನ್ನೇ ಬಲಿ ತೆಗೆದುಕೊಳ್ಳುತ್ತದೆ. ಭಾರತದ ಯುವ ಸಮಾಜವು ಸ್ವಾಮಿ ವಿವೇಕಾನಂದರ ರಾಷ್ಟ್ರೀಯತೆಯ ವಿಚಾರಧಾರೆಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಡ್ರಗ್ಸ್ ಮುಕ್ತರಾಗಿ ದೇಶ ಕಟ್ಟುವ ಕಾಯಕದಲ್ಲಿ ಕೈಜೋಡಿಸಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಕರೆ ನೀಡಿದರು. 


ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಪ್ರಯುಕ್ತ ಯೂಥ್ ಫಾರ್ ನೇಶನ್ ಯುವ ಸಂಘಟನೆ ಸುರತ್ಕಲ್ ಗೋವಿಂದ ದಾಸ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾದ ಡ್ರಗ್ಸ್ ಫ್ರೀ ಇಂಡಿಯಾ ಕುರಿತ ವಿಶೇಷ ಉಪನ್ಯಾಸವನ್ನು ವಿದ್ಯಾರ್ಥಿಗಳಿಗೆ ನೀಡಿದರು. 


ಡ್ರಗ್ಸ್ ಕುರಿತಂತೆ ವಿದ್ಯಾರ್ಥಿಗಳಿಗೆ ಮಾರಕ ದುಷ್ಪರಿಣಾಮಗಳ ಕುರಿತು, ಡ್ರಗ್ಸ್ ಸೇವನೆಯಿಂದ ದೇಹಕ್ಕೆ ಆಗುವ ಮಾರಕ ಹಾನಿಯ ಕುರಿತು ಜ್ಞಾನವನ್ನು ಬೆಳೆಸಿಕೊಂಡಾಗ ಅದರಿಂದ ದೂರವಿರಲು ಸಾಧ್ಯವಾಗುತ್ತದೆ. ಸಿಗರೇಟು, ಮಧ್ಯ ಸೇವನೆ, ಗಾಂಜಾ, ಅಫೀಮು ಮತ್ತಿತರ ಮಾದಕ ವಸ್ತುಗಳ ಸೇವನೆಯಿಂದ ದುಶ್ಚಟಕ್ಕೆ ಒಳಗಾಗಿ ಬಲಿಯಾಗುವುದರ ಜೊತೆಗೆ ಜೀವನವೇ ನಾಶವಾಗುತ್ತದೆ. ಒಂದು ಬಾರಿ ಮಾದಕ ವಸ್ತುವಿಗೆ ಬಲಿಯಾದರೆ, ಭಾರತದ ಕಾನೂನು ರೀತಿಯ ಶಿಕ್ಷೆಗೆ ಒಳಗಾದರೆ ಸರಕಾರಿ ಉದ್ಯೋಗ, ವಿದೇಶದಲ್ಲಿ ಉದ್ಯೋಗ ಸಿಗಲಾರದು, ಜೊತೆಗೆ ಕೇಸು ದಾಖಲಾಗುವುದರಿಂದ ಸಮಾಜದಲ್ಲಿಯೂ ಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯುವ ವಿದ್ಯಾರ್ಥಿನಿಯರು ಭಾರತದ ಭವಿಷ್ಯವನ್ನು ಬೆಳಗುವ ಶಕ್ತಿಗಳಾಗಿ ಬೆಳೆಯಬೇಕು. ಭವಿಷ್ಯದ ಭಾರತವನ್ನು ಕಟ್ಟುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ದುಶ್ಚಟಗಳಿಂದ ದೂರ ಇರುತ್ತೇನೆ, ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ದೃಢಸಂಕಲ್ಪವನ್ನು ತೆಗೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. 

ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಅವರು ಸ್ವಾಮಿ ವಿವೇಕಾನಂದರು ತತ್ವ ಆದರ್ಶಗಳನ್ನು ರೂಡಿಸಿಕೊಳ್ಳಲು ಅವರ ತಂದೆ ತಾಯಿ ಉತ್ತಮ ಸಂಸ್ಕಾರವನ್ನು ನೀಡಿರುವುದು ಕಾರಣ. ಪೋಷಕರು ಮಕ್ಕಳ ಭವಿಷ್ಯದ ಕುರಿತಾಗಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ., ಅಧ್ಯಕ್ಷತೆ ವಹಿಸಿದ್ದರು. 

ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್, ಕರಾವಳಿ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಉಪ ಪ್ರಾಂಶುಪಾಲೆ ಸುನೀತಾ, ಟ್ರಸ್ಟಿ ಎಂ ಜಿ ರಾಮಚಂದ್ರ ರಾವ್ ಉಪಸ್ಥಿತರಿದ್ದರು. ರಕ್ಷಿತ್ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕ ಪೈಕ ವೆಂಕಟ್ರಮಣ ಭಟ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article