ನಾಳೆಯಿಂದ ಧರ್ಮಸ್ಥಳದಲ್ಲಿ ಧ್ಯಾನ ಮಹಾಯಜ್ಞ
ಉಜಿರೆ: ಬೆಂಗಳೂರಿನ ವಿಶ್ವ ಚೈತನ್ಯ ಕ್ವಾಂಟಮ್ ಫೌಂಡೇಶನ್ ನೇತೃತ್ವದಲ್ಲಿ ಜ.22 ರಿಂದ 25ರ ವರೆಗೆ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ‘ಧ್ಯಾನ ಮಹಾಯಜ್ಞ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
‘ಧ್ಯಾನದಿಂದ ಜ್ಞಾನ, ಜ್ಞಾನದಿಂದ ಮುಕ್ತಿ’ ಎಂಬ ಧ್ಯೇಯದೊಂದಿಗೆ ಪ್ರತಿದಿನ ಏಳು ಗಂಟೆಗಳ ಕಾಲ ಸಂಗೀತದೊಂದಿಗೆ ಧ್ಯಾನ ಮಹಾಯಜ್ಞ ನಡೆಯಲಿದೆ. ಪತ್ರೀಜಿಯವರ ಆಶೀರ್ವಾದದೊಂದಿಗೆ ಪ್ರತಿದಿನ ಏಳು ಗಂಟೆಗಳ ಕಾಲ ಸಂಗೀತದೊಂದಿಗೆ ಧ್ಯಾನ ಕಾರ್ಯಕ್ರಮ ನಡೆಯಲಿದೆ. ಪತ್ರೀಜಿ ಅವರ ಜ್ಞಾನ ಸಂದೇಶ, ಹಿರಿಯ ಧ್ಯಾನಿಗಳಾದ ಪ್ರಕಾಶಬಾಬು, ವಿನುತಾ, ಲಲಿತಾನಾರಾಯಣ ವಗ್ಗ, ಮಂಜುನಾಥ್ ಮೊದಲಾದವರು ವಿಶೇಷ ಉಪನ್ಯಾಸ, ಮಾರ್ಗದರ್ಶನ ನೀಡಲಿದ್ದಾರೆ. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಅವರು ಗುರುವಾರ ಧ್ಯಾನ ಮಹಾಯಜ್ಞ ಕಾರ್ಯಕ್ರಮ ಉದ್ಘಾಟಿಸುವರು.
ಬೆಂಗಳೂರಿನ ದಿವ್ಯಜ್ಞಾನಾನಂದ ಸ್ವಾಮೀಜಿ, ಸಾಯಿಕೀರ್ತಿನಾಥ ಸ್ವಾಮೀಜಿ, ಬಿ. ಶಿವರಾಮಪ್ಪ, ಶ್ರೀನಿವಾಸ್ ಮತ್ತು ದಿವ್ಯ, ಬ್ರಹ್ಮರ್ಷಿ ಪ್ರೇಮನಾಥ್, ಯೋಗಮಿತ್ರ ಡಾ. ಸುಬ್ಬು ಭಯ್ಯ ಮೊದಲಾದವರು ಭಾಗವಹಿಸಿ ಮಾರ್ಗದರ್ಶನ ನೀಡುವರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜ.25 ರಂದು ಸಮಾರೋಪ ಸಮಾರಂಭ ನಡೆಯಲಿದೆ.