ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ: ಆಂಧ್ರಕ್ಕೆ ಭೇಟಿ ನೀಡಿದ ಅಧ್ಯಯನ ತಂಡ

ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ: ಆಂಧ್ರಕ್ಕೆ ಭೇಟಿ ನೀಡಿದ ಅಧ್ಯಯನ ತಂಡ


ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ರೂಪಿಸಬೇಕಾದ ಕಾನೂನು ಪ್ರಕ್ರಿಯೆಗಳ ಬಗ್ಗೆ ಹಾಗೂ ಅನುಷ್ಠಾನದ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡಲು ರಾಜ್ಯ ಸರ್ಕಾರವು ನೇಮಿಸಿದ್ದ ಅಧ್ಯಯನ ಸಮಿತಿಯು ಆಂಧ್ರ ಪ್ರದೇಶಕ್ಕೆ ತೆರಳಿ 2 ದಿನಗಳ ಕಾಲ ಆಂಧ್ರ ಸರಕಾರದ ವಿವಿಧ ಇಲಾಖೆಗಳ ಜೊತೆಗೆ ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ನಿರ್ದೇಶಕಿ ಕೆ.ಎಮ್ ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಉಪಸ್ಥಿತಿಯಲ್ಲಿ 7 ಮಂದಿಯ ಅಧ್ಯಯನ ಸಮಿತಿಯು ಜ.19 ಮತ್ತು 20 ರಂದು ಆಂದ್ರಪ್ರದೇಶದ ರಾಜಧಾನಿ ಅಮರಾವತಿ ಹಾಗೂ ಎನ್.ಟಿ.ಆರ್ ಜಿಲ್ಲೆಯ ವಿವಿಧ ಕಛೇರಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. 


ಮೊದಲ ದಿನ ಅಧ್ಯಯನ ತಂಡವು ಸಚಿವಾಲಯದಲ್ಲಿ ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಾನಂದ ಅವರನ್ನು ಭೇಟಿ ನೀಡಿ ಸಮಾಲೋಚನೆ ನಡೆಸಿತು. ಆಂಧ್ರಪ್ರದೇಶದಲ್ಲಿ ಉರ್ದು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಘೋಷಣೆ ಮಾಡಿರುವುದರಿಂದ ಉರ್ದು ಭಾಷಾ ಬೆಳವಣಿಗೆ ಸಹಕಾರಿಯಾಗಿದೆ,  ಕರ್ನಾಟಕದಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ನಿಲುವು ಅತ್ಯಂತ ಶ್ಲಾಘನೀಯವಾದುದು ಎಂದು ವಿಜಯಾನಂದ ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ವಿಧಾನ ಮಂಡಲದ ಸ್ಪೀಕರ್ ಕಛೇರಿ ಸೇರಿದಂತೆ ವಿವಿಧ ಕಛೇರಿಗಳಿಗೂ ಅಧ್ಯಯನ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ಆಂಧ್ರ ಪ್ರದೇಶ ಅಲ್ಪಸಂಖ್ಯಾಂತ ಇಲಾಖೆಯ ಕಾರ್ಯದರ್ಶಿಯವರನ್ನು, ಆಂಧ್ರ ಪ್ರದೇಶ ಉರ್ದು ಅಕಾಡೆಮಿಯ ಅಧ್ಯಕ್ಷರನ್ನು, ಆಂಧ್ರ ಉರ್ದು ಭಾಷಾ ಅಭಿವೃದ್ಧಿ ಮಂಡಳಿಯ ನಿರ್ದೇಶಕರನ್ನು ಕೂಡ ಭೇಟಿ ಮಾಡಿ ಆಂಧ್ರಪ್ರದೇಶದಲ್ಲಿ ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿದ ಬಳಿಕದ ಅನುಷ್ಠಾನ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಅಧ್ಯಯನ ಸಮಿತಿಯ 2ನೇ ದಿನದ ಭೇಟಿಯಲ್ಲಿ ಅಮರಾವತಿ ಮಹಾನಗರ ಪಾಲಿಕೆಯ ವಲಯ ಕಮೀಷನರ್, ಸ್ಥಳೀಯ ಪೋಲಿಸ್ ಠಾಣೆ, ಸ್ಥಳೀಯ ಉರ್ದು ಮಾಧ್ಯಮ ಶಾಲೆ, ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆ, ಆಂಧ್ರ ಪ್ರದೇಶ ತೆಲುಗು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಹಾಗೂ ಎನ್.ಟಿ.ಆರ್. ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಜಿ. ಲಕ್ಷ್ಮೀಶ ಅವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಯಿತು.

ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವುದರಿಂದ ತೆಲುಗು ಭಾಷಾ ಅಭಿವೃದ್ಧಿಗೆ ಯಾವುದೇ ತೊಡಕುಗಳು ಆಗಿರುವುದಿಲ್ಲ ಎಂಬುದನ್ನು ತೆಲುಗು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತ್ರಿವಿಕ್ರಮ್ ರಾವ್ ಅವರು ಈ ಸಂದರ್ಭದಲ್ಲಿ ಅಧ್ಯಯನ ತಂಡಕ್ಕೆ ತಿಳಿಸಿದರು.

ವಿವಿಧ ಇಲಾಖೆಗಳಿಗೆ ಭೇಟಿಯ ಸಂದರ್ಭದಲ್ಲಿ ತುಳು ಭಾಷೆಯ ಚಾರಿತ್ರಿಕ ಹಿನ್ನೆಲೆ, ಸಾಹಿತ್ಯಿಕ ಹಿನ್ನೆಲೆ, ಪರಂಪರೆ ಬಗ್ಗೆ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಅಧ್ಯಯನ ಸಮಿತಿಯಲ್ಲಿ ಕಾನೂನು ಇಲಾಖೆಯ ಉಪಕಾರ್ಯದರ್ಶಿ ವನಿತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪಕಾರ್ಯದರ್ಶಿ ಶುಭಶ್ರಿ ಕೆ.ಎಮ್., ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್., ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸುಧಾಕರ ಶೆಟ್ಟಿ, ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಪ್ರೊ. ಲಿಂಗಪ್ಪ ಗೋನಾಳ್ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article