ಮನೆಗೆ ನುಗ್ಗಿ ಕಪಾಟು ಜಾಲಾಡಿದ ಕಳ್ಳರು: ಬೆಲೆ ಬಾಳುವ ವಸ್ತುಗಳ ಕಳ್ಳತನ
ಕೆಸಿನಗರ ನಿವಾಸಿ ಅಬೂಬಕ್ಕರ್ ಎಂಬವರ ಮನೆಯಲ್ಲಿ ಈ ನಡೆದಿದೆ.
ಘಟನೆ ವಿವರ: ಎಲಿಯಾರ್ ಪದವು ಅಂಗಡಿ ಹೊಂದಿದ್ದ ಅಬೂಬಕ್ಕರ್ ಅವರು ಕಳೆದ 25 ವರ್ಷ ಗಳಿಂದ ಸೌದಿ ಅಲ್ ಕೋಬಾರ್‌ನಲ್ಲಿ ಉದ್ಯೋಗದಲ್ಲಿ ಇದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಅಬೂಬಕ್ಕರ್ ಪತ್ನಿ ಝೀನತ್, ಪುತ್ರ ಇಝಾಮ್ ಹಾಗೂ ಪುತ್ರಿ ಸಫಾ ಈ ಮನೆಗೆ ಬೀಗ ಹಾಕಿ ಕುಟುಂಬ ಸಹಿತ ಸೌದಿಗೆ ಹೋಗಿದ್ದರು. ಇದರ ಬಳಿಕ ಅಬೂಬಕ್ಕರ್ ಅವರ ಸಹೋದರನ ಪತ್ನಿ ಮೈನಾಝ್ ಇಂದು ಮನೆ ನೋಡಿ ಸ್ವಚ್ಛ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮನೆಯ ಮುಂಬಾಗಿಲನ್ನು ಒಡೆದು ಒಳ ನುಗ್ಗಿದ ಕಳ್ಳರು ಕೆಳ ಮಹಡಿಯಲ್ಲಿರುವ ಮೂರು ಕೊಠಡಿಗಳು ಹಾಗೂ ಮೊದಲ ಮಹಡಿಯಲ್ಲಿ ಇರುವ ಒಂದು ಕೊಠಡಿಯಲ್ಲಿರುವ ಒಟ್ಟು ನಾಲ್ಕು ಕಪಾಟುಗಳನ್ನು ಒಡೆದು ಜಾಲಾಡಿದ್ದಾರೆ. ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೇ ಅಡುಗೆ ಕೋಣೆಯ ಕಪಾಟುಗಳನ್ನು ಜಾಲಾಡಿದ ಕಳ್ಳರಿಗೆ ಚಿನ್ನಾಭರಣ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕಳ್ಳರು ಕಪಾಟಿನಲ್ಲಿದ್ದ ಬೆಲೆ ಬಾಳುವ ವಾಚ್, ಮೊಬೈಲ್ ಕಳವುಗೈದಿದ್ದಾರೆ.
ಈ ಮನೆಯ ಕುಟುಂಬ ವಿದೇಶಕ್ಕೆ ಹೋಗುವ ಮೊದಲೇ ಚಿನ್ನಾಭರಣಗಳನ್ನು ಸೇಫ್ ಲಾಕರ್‌ನಲ್ಲಿ ಇಟ್ಟು ಹೋಗಿದ್ದರು ಎಂದು ಅಬೂಬಕ್ಕರ್ ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ಅಬೂಬಕ್ಕರ್ ಅವರ ಬಾವ ಶೇಖಬ್ಬ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.