ಪಾಣೆಮಂಗಳೂರು ಸ್ಕೂಟರ್‌ಗೆ ಕಾರು ಢಿಕ್ಕಿ: ಸವಾರ ಗಂಭೀರ
ಬಂಟ್ವಾಳ: ಕಾರು ಢಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಪಾಣೆಮಂಗಳೂರು ಸರ್ವೀಸ್ ರಸ್ತೆಯಲ್ಲಿ ನಡೆದಿದೆ.
ಸ್ಕೂಟರ್ ಸವಾರ ನರಿಕೊಂಬು ನಿವಾಸಿ ಮುಸ್ತಫಾ ಗಾಯಗೊಂಡು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ನರಿಕೊಂಬು ರಸ್ತೆಯಿಂದ ಅಂಡರ್ ಪಾಸ್‌ನ ಮೂಲಕ ಪಾಣೆಮಂಗಳೂರು ರಸ್ತೆಯನ್ನು ದಾಟುವ ವೇಳೆ ಮೆಲ್ಕಾರ್ ಕಡೆಯಿಂದ ಸರ್ವೀಸ್ ರಸ್ತೆಯಲ್ಲಿ ಬರುತ್ತಿದ್ದ ಸ್ವಿಫ್ಟ್ ಕಾರು ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಸರ್ವಿಸ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ನರಿಕೊಂಬು ಕಡೆಯಿಂದ ಪಾಣೆಮಂಗಳೂರಿಗೆ ತೆರಳುವ ವೇಳೆ ಅಂಡರ್ ಪಾಸ್ ಮೂಲಕ ಸಾಗಬೇಕು. ಈ ವೇಳೆ ಇನ್ನೊಂದು ಬದಿಯಿಂದ ವಾಹನಗಳು ಆಗಮಿಸುವುದು ಗೊತ್ತಾಗದಂಥ ಪರಿಸ್ಥಿತಿ ಇದೆ. ಕಲ್ಲುರ್ಟಿ ಸನ್ನಿಧಿ ಬಳಿ ಪಾಣೆಮಂಗಳೂರು ಪೇಟೆಗೆ ತೆರಳುವ ರಸ್ತೆಗೆ ಹೋಗುವ ಮಾರ್ಗ, ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆ ಸಮೀಪದಿಂದ ಪಾಣೆಮಂಗಳೂರು ಹಳೇ ಸೇತುವೆಯಾಗಿ ಬಿ.ಸಿ.ರೋಡಿಗೆ ತೆರಳುವ ಮಾರ್ಗ ಹಾಗೂ ಸರ್ವೀಸ್ ರಸ್ತೆ ಮೂಲಕ ಹೆದ್ದಾರಿಗೆ ಸೇರುವ ರಸ್ತೆಯಿದ್ದು, ಇಲ್ಲಿ ವೇಗನಿಯಂತ್ರಣ ವ್ಯವಸ್ಥೆಗಾಗಿ ಈ ಹಿಂದೆಯೇ ಸಾರ್ವಜನಿಕರು ಒತ್ತಾಯಿಸಿದ್ದರು.
ಈ ಪ್ರದೇಶ ಅಪಘಾತ ವಲಯವಾಗಿ ಗುರುತಿಸಲ್ಪಟ್ಟಿರುವುದಕ್ಕೆ ಸೋಮವಾರ ನಡೆದ ಅಪಘಾತ ಸಾಕ್ಷಿ. ಇದೇ ಜಾಗದಲ್ಲಷ್ಟೇ ಅಲ್ಲ, ಮೆಲ್ಕಾರ್‌ನ ಅಂಡರ್ ಪಾಸ್ ಹಾಗೂ ಮಾಣಿ ಅಂಡರ್ ಪಾಸ್‌ನಲ್ಲೂ ಇಂಥ ಸಮಸ್ಯೆಗಳಿದ್ದು, ಅಪಘಾತಕ್ಕೆ ಆಹ್ವಾನ ನೀಡುವಂತಿದೆ