ಮಳೆ ನಂತರ ಹಳದಿ ಬಣ್ಣದ ಚುಕ್ಕೆ

ಮಳೆ ನಂತರ ಹಳದಿ ಬಣ್ಣದ ಚುಕ್ಕೆ


ಕಡಬ: ತಾಲೂಕಿನ ಕೊಂಬಾರು, ಸಿರಿಬಾಗಿಲು ಮತ್ತು ಕೈಕಂಬ ಪರಿಸರದಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಮುಂಜಾನೆ ಸುರಿದ ತುಂತುರು ಮಳೆಯ ನಂತರ ವಿಚಿತ್ರ ವಿದ್ಯಮಾನವೊಂದು ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದೆ. 

ಮಳೆ ಬಿದ್ದ ಜಾಗಗಳಲ್ಲಿ ಹಳದಿ ಬಣ್ಣದ ಚುಕ್ಕೆಗಳು ಪತ್ತೆಯಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಗುರುವಾರ ರಾತ್ರಿ ಸುರಿದ ತುಂತುರು ಮಳೆಯು ಆರಂಭದಲ್ಲಿ ಜನರ ಗಮನಕ್ಕೆ ಬಂದಿರಲಿಲ್ಲ. 

ಆದರೆ, ಶುಕ್ರವಾರ ಬೆಳಿಗ್ಗೆ ಎದ್ದು ನೋಡಿದಾಗ ಮನೆಗಳ ಅಂಗಳ, ಗಿಡಮರಗಳ ಎಲೆಗಳು, ವಾಹನಗಳು ಹಾಗೂ ಹೊರಗಡೆ ಒಣಗಲು ಹಾಕಿದ್ದ ಬಟ್ಟೆಗಳ ಮೇಲೆ ಕೇಸರಿ ಮಿಶ್ರಿತ ಹಳದಿ ಬಣ್ಣದ ಮಚ್ಚೆಗಳು ಕಂಡುಬಂದಿವೆ. ಈ ಚುಕ್ಕೆಗಳು ಒಣಗಿದ ನಂತರ ಹತ್ತಿಯಿಂದ ಒರೆಸಿದಾಗ ಪುಡಿಯಂತೆ ಕಂಡುಬರುತ್ತಿವೆ. 

ಸುತ್ತಮುತ್ತಲಿನ ಹಲವು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇದೇ ರೀತಿಯ ಚುಕ್ಕೆಗಳು ಗೋಚರಿಸಿವೆ. ಫೆಬ್ರವರಿ ತಿಂಗಳು ಅಡಿಕೆ, ರಬ್ಬರ್ ಹಾಗೂ ಕಾಡಿನ ವಿವಿಧ ಮರಗಳು ಹೂಬಿಡುವ ಸಮಯ. ಈ ಸಂದರ್ಭದಲ್ಲಿ ಗಾಳಿಯಲ್ಲಿ ಲಕ್ಷಾಂತರ ಸಂಖ್ಯೆಯ ಪರಾಗದ ಪುಡಿಗಳು ತೇಲುತ್ತಿರುತ್ತವೆ. ತುಂತುರು ಮಳೆ ಬಂದಾಗ, ಈ ಮಳೆಹನಿಗಳು ಗಾಳಿಯಲ್ಲಿರುವ ಪರಾಗವನ್ನು ಹಿಡಿದಿಟ್ಟುಕೊಂಡು ಭೂಮಿಗೆ ಬೀಳುತ್ತವೆ. ನೀರು ಆವಿಯಾದ ನಂತರ ಹಳದಿ ಬಣ್ಣದ ಪುಡಿ ಮಾತ್ರ ಚುಕ್ಕೆಗಳಂತೆ ಉಳಿಯುತ್ತದೆ. ಇದು ಅತ್ಯಂತ ಸಂಭವನೀಯ ಕಾರಣವಿರಬಹುದೆಂದು ಶಂಕಿಸಲಾಗಿದೆ. 

ವಾತಾವರಣದ ಮೇಲ್ಪದರದಲ್ಲಿರುವ ಧೂಳಿನ ಕಣಗಳು ಮಳೆಹನಿಯೊಂದಿಗೆ ಸೇರಿ ಭೂಮಿಗೆ ಬಿದ್ದಾಗಲೂ ಇಂತಹ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿಂದೆ ಕೊಡಗು ಮತ್ತು ಕರಾವಳಿಯ ಕೆಲವು ಭಾಗಗಳಲ್ಲಿಯೂ ಇಂತಹ ಘಟನೆಗಳು ನಡೆದಿದ್ದು, ಅವು ಸಸ್ಯಗಳ ಪರಾಗದ ಪುಡಿ ಎಂದು ದೃಢಪಟ್ಟಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article