ಎಸ್‌ಡಿಪಿಐ ಸದಸ್ಯೆಯ ಜೊತೆ ಕೈಜೋಡಿಸಿದಕ್ಕೆ ಉಚ್ಛಾಟನೆ

ಎಸ್‌ಡಿಪಿಐ ಸದಸ್ಯೆಯ ಜೊತೆ ಕೈಜೋಡಿಸಿದಕ್ಕೆ ಉಚ್ಛಾಟನೆ


ಉಳ್ಳಾಲ: ಕಳೆದ ಒಂದೂವರೆ ವರುಷದಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಲ್ಲದೆ, ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಎಸ್‌ಡಿಪಿಐ ಸದಸ್ಯೆಯ ಜೊತೆ ಕೈಜೋಡಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಕ್ಕಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಾದ ಸುಜಿತ್ ಮಾಡೂರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಸಾಮಾನ್ಯ ಸಭೆಯ ವಿಚಾರವು ಉಚ್ಚಾಟನೆಗೆ ಪ್ರತ್ಯಕ್ಷ ಕಾರಣವಾದರೆ, ಪಕ್ಷದೊಳಗಿನ ಆಂತರಿಕ ವಿಚಾರ ಬೇರೆಯೇ ಇದ್ದು, ಅದನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲವೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್. ತಿಳಿಸಿದ್ದಾರೆ.

ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು.

ಕಳೆದ ಜನವರಿ 29 ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಸುಜಿತ್ ಅವರು ಎಸ್ಡಿಪಿಐನ ಕೌನ್ಸಿಲರ್ ಜೊತೆ ಸೇರಿ ಪ್ರತಿಭಟಿಸಿದ್ದರು. ಈ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದು ಎಸ್‌ಡಿಪಿಐ-ಬಿಜೆಪಿ ನಡುವಿನ ಹೊಂದಾಣಿಕೆಯ ಬಗ್ಗೆ ಜನರು ಪ್ರಶ್ನಿಸುವಂತಾಗಿದ್ದು, ಇದರಿಂದ ಪಕ್ಷಕ್ಕೆ ಮುಜುಗರದ ಸ್ಥಿತಿ ಎದುರಾಗಿತ್ತು. ಅಧಿಕಾರಿಗಳು ಕೂಡ ಪಂಚಾಯತ್ ಆಡಳಿತದ ಭಾಗವಾಗಿದ್ದಾರೆನ್ನುವುದನ್ನು ಸುಜಿತ್ ಅವರು ಮನಗಾನಬೇಕಿತ್ತು. ಸಾಮಾನ್ಯ ಸಭೆಯ ಪೂರ್ವಭಾವಿಯಾಗಿ ಬಿಜೆಪಿ ಪಕ್ಷದ ಕೌನ್ಸಿಲರ್‌ಗಳ ಆಂತರಿಕ ಸಮಾಲೋಚನಾ ಸಭೆ ಇರುತ್ತದೆ. ಅಲ್ಲಿ ತಮ್ಮ, ತಮ್ಮ ವಾರ್ಡ್‌ಗಳ ಸಮಸ್ಯೆ ಬಗೆಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಆ ತೀರ್ಮಾನಗಳನ್ನು ಬಿಟ್ಟು ಬೇರೆಯೇ ವಿಚಾರಗಳನ್ನು ಮುಂದಿಟ್ಟು ಪಂಚಾಯತಿ ಆಡಳಿತಕ್ಕೆ ಮುಜುಗರ ತರುವ ರೀತಿಯಲ್ಲಿ ಚರ್ಚಿಸುವುದನ್ನು ಪದೇ ಪದೇ ಸಹಿಸಲು ಸಾಧ್ಯವಿಲ್ಲವೆಂದರು.

ಪಂಚಾಯತಿ ಆಡಳಿತದ ವಿರುದ್ಧ ಭೂಮಾಫಿಯಾ ಆರೋಪದ ಬಗ್ಗೆ ಮಾತನಾಡಿದ ಅವರು ನಡುಕುಮೇರಿನ ಸರಕಾರಿ ಭೂಮಿಯನ್ನು ಅತಿಕ್ರಮಿಸಿ ಮನೆಗಳನ್ನು ಕಟ್ಟಿದವರ ವಿರುದ್ಧ ಪಂಚಾಯತ್ ಅಧ್ಯಕ್ಷರು ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.ಅತಿಕ್ರಮಣಕಾರರು ಕುಮ್ಕಿ ಹಕ್ಕಿನಡಿ ಹೈ ಕೋರ್ಟಲ್ಲಿ ರಿಟ್ ಪಿಟೀಷನ್ ಹಾಕಿ ತಡೆ ತಂದಿರುವುದರಿಂದ ಕೆಲವೊಂದು ಅಡಚಣೆಯಾಗಿತ್ತು. ಈಗಲೂ ಜಿಲ್ಲಾಧಿಕಾರಿಗೆ ಅರ್ಜಿ ಕೊಟ್ಟು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಅಧ್ಯಕ್ಷರು ಮುಂದುವರೆಸಿದ್ದಾರೆ. ಪಂಚಾಯತ್ ಅಧಿಕಾರಿಗಳ ಸಮರ್ಪಕ ಸಹಕಾರ ಲಭಿಸದೆ ಅಕ್ರಮ ಕಟ್ಟಡ ತೆರವು ಕಾರ್ಯ ವಿಳಂಬವಾಗಿದೆಯೆಂದರು.

ಅಕ್ರಮ ಕಟ್ಟಡ ತೆರವುಗೊಳಿಸಲು ನಮ್ಮಲ್ಲಿ ಅಧಿಕಾರಿಗಳು, ಪೊಲೀಸರು ಲಭ್ಯವಿಲ್ಲವೆಂದು ಸಾಮಾನ್ಯ ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದ ಮುಖ್ಯಾಧಿಕಾರಿಯ ನಡೆಯು ಪಂಚಾಯತ್ ಆಡಳಿತದ ವೈಫಲ್ಯವಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಕ್ಕೆ ಉತ್ತರಿಸಿದ ಮೋಹನ್ ರಾಜ್ ಅವರು ಅಧಿಕಾರಿಗಳು ಅಸಹಾಯಕತೆ ತೋರ್ಪಡಿಸಿದ್ದು ರಾಜ್ಯ ಸರಕಾರದ ವೈಫಲ್ಯವಾಗಿದೆ.ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳನ್ನು ಬದಲಾಯಿಸುವುದು ರಾಜ್ಯ ಸರಕಾರದ ಜವಬ್ದಾರಿಯಾಗಿದೆಯೆಂದರು. ಕೆಲಸ ಮಾಡದ ಅಧಿಕಾರಿಗಳನ್ನು ವರ್ಗಾಯಿಸಿ ಒಳ್ಳೆಯ ಅಧಿಕಾರಿಗಳನ್ನ ನಿಯೋಜಿಸುವಂತೆ ಅವರು ಶಾಸಕ ಖಾದರ್ ಅವರನ್ನು ಆಗ್ರಹಿಸಿದರು.

ಕೋಟೆಕಾರು ಪ.ಪಂ. ಅಧ್ಯಕ್ಷೆ ದಿವ್ಯಾ ಶೆಟ್ಟಿ ಮಾತನಾಡಿ, ನಮ್ಮ ಆಡಳಿತವು ವಸತಿ ರಹಿತರಿಗೆ ನಿವೇಶನ ನೀಡಲು ಸತತ ಪ್ರಯತ್ನ ನಡೆಸುತ್ತಿದೆಯಾದರೂ ವಿನಾಃ ಕಾರಣ ಸುಳ್ಳು ಆರೋಪಗಳನ್ನ ಹೊರಿಸಲಾಗುತ್ತಿದೆ. ಕಳೆದ ಬಾರಿಯ ಆಡಳಿತಾವಧಿಯಲ್ಲಿ ಪಟ್ಟಣ ವ್ಯಾಪ್ತಿಯ ಬಗಂಬಿಲದ ಎರಡು ಎಕರೆ ಸರಕಾರಿ ಜಾಗವನ್ನು ನಮ್ಮ ಆಡಳಿತದ ಗಮನಕ್ಕೆ ಬಾರದಂತೆ ಉಳ್ಳಾಲದ ಕಡಲ್ಕೊರೆತ ಸಂತ್ರಸ್ತರ ನಿವೇಶನಕ್ಕಾಗಿ ಅಧಿಕಾರಿಗಳು ಮೀಸಲಿಟ್ಟಿದ್ದಾರೆ. ನಿವೇಶನ ರಹಿತರಿಗೆ ಹಂಚುವ ನಿಟ್ಟಿನಲ್ಲಿ ಆ ಜಾಗವನ್ನು ಪಟ್ಟಣ ಪಂಚಾಯತ್ ಸುಪರ್ದಿಗೆ ತರಬೇಕೆಂದು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ. ಕಾಯರ್ ಮಜಲ್ ಎಂಬಲ್ಲಿನ ಹತ್ತು ಎಕರೆಯಷ್ಟು ಜಾಗವನ್ನ ನಿವೇಶನ ರಹಿತರು ಮತ್ತು ತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಾಯ್ದಿರಿಸಲಾಗಿತ್ತು. ಮನೆ ನಿವೇಶನ ಮತ್ತು ತ್ಯಾಜ್ಯ ವಿಲೇವಾರಿ ಘಟಕವನ್ನು ಒಂದೇ ಸರ್ವೇ ಸಂಖ್ಯೆಯಡಿ ಕಾಯ್ದಿರಿಸಿದ ಕಾರಣ ಸ್ಥಳೀಯರು ತ್ಯಾಜ್ಯ ಘಟಕ ನಿರ್ಮಾಣ ವಿರುದ್ಧ ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿ ತಡೆಯಾಜ್ನೆ ತಂದಿದ್ದರು.ಹೈ ಕೋರ್ಟ್ ತಡೆಯಾಜ್ನೆ ತೆರವುಗೊಳಿಸಲು ನಾವು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಬದಲಿ ಜಾಗ ನೀಡಬೇಕಿದೆ. ಪಟ್ಟಣವು ಜನನಿಬೀಡ ಪ್ರದೇಶವಾದುದರಿಂದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ನೀಡಲು ನಮಗೆ ಅಸಾಧ್ಯವಾಗಿದ್ದು, ಹಾಗಾಗಿ ಕಾಯರ್ ಮಜಲು ಪ್ರದೇಶದಲ್ಲೂ ಅರ್ಜಿದಾರರಿಗೆ ನಿವೇಶನ ನೀಡಲು ಅಡಚಣೆಯಾಗಿದೆ ಎಂದರು.

ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ಪ್ರ.ಕಾ. ದಯಾನಂದ ತೊಕ್ಕೊಟ್ಟು, ಕೋಟೆಕಾರು ಪ.ಪಂ. ಉಪಾಧ್ಯಕ್ಷ ಪ್ರವೀಣ್ ಐ. ಬಗಂಬಿಲ, ಬಿಜೆಪಿ ಪ್ರಮುಖರಾದ ಅತುಲ್ ಬಗಂಬಿಲ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article