‘ಗಣ್ಯರೆಡೆಗೆ ಬೊಂಬೆ ನಡಿಗೆ’: ಚಾಲನೆ

‘ಗಣ್ಯರೆಡೆಗೆ ಬೊಂಬೆ ನಡಿಗೆ’: ಚಾಲನೆ


ಕಾಸರಗೋಡು: ಕಾಸರಗೋಡು ಗೋಪಾಲಕೃಷ್ಣ ಬೊಂಬೆಯಾಟದ ಉಳಿವಿಗಾಗಿ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಯಕ್ಷಗಾನ ಬೊಂಬೆಯಾಟಕ್ಕೆ ಧರ್ಮಸ್ಥದಲ್ಲಿ ಚಾಲನೆ ನೀಡಲಾಗಿದೆ.

ತೆಂಕುತಿಟ್ಟು ಯಕ್ಷಗಾನವನ್ನು ಬೊಂಬೆಯಾಟದ ಮೂಲಕ ಪ್ರದರ್ಶಿಸುತ್ತಿರುವ ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಮೂಲಕ ವಿಶ್ವದ ಗಮನ ಸೆಳೆದಿದೆ. 2030ರಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವ ನಡೆಯಲಿದ್ದು, ಚಂದ್ರಗಿರಿ ತೀರದ ಯಕ್ಷಪುತ್ಥಳಿ ಬೊಂಬೆಮನೆಯಲ್ಲಿ ಸಾವಿರ ಬೊಂಬೆಗಳ ಮ್ಯೂಸಿಯಂ ಪ್ರಗತಿ ಪಥದಲ್ಲಿದೆ ಎಂದು ಕಾಸರಗೋಡು ಗೋಪಾಲಕೃಷ್ಣ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ. ರಮೇಶ್ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕದಲ್ಲಿ ಇದನ್ನು ‘ಗೊಂಬೆಯಾಟ’ ಎಂದರೆ, ಕಾಸರಗೋಡು ಭಾಗದಲ್ಲಿ ಭಾಷಾ ವೈವಿಧ್ಯದಿಂದಾಗಿ ‘ಬೊಂಬೆಯಾಟ’ ಎಂದು ಕರೆಯಲಾಗುತ್ತದೆ. ಯಕ್ಷಗಾನದ ಕಥಾನಕ, ಸಂಗೀತ, ವೇಷಭೂಷಣ ಹಾಗೂ ನೃತ್ಯ ವೈಭವವನ್ನು ಸೂತ್ರಧಾರಿ ಬೊಂಬೆಗಳ ಮೂಲಕ ಪ್ರದರ್ಶಿಸುವ ಈ ಕಲಾರೂಪವು ಇಂದು ಅಪರೂಪವಾಗುತ್ತಿದ್ದು, ಅದರ ಉಳಿವಿಗಾಗಿ ನಿರಂತರ ಪ್ರಯತ್ನ ಅಗತ್ಯವಾಗಿದೆ. ಕಾಸರಗೋಡಿನ ಪಿಲಿಕುಂಜೆಯಲ್ಲಿ ನೆಲೆಗೊಂಡಿರುವ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ದೇಶದ ಏಕೈಕ ತೆಂಕುತಿಟ್ಟು ಶೈಲಿಯ ಯಕ್ಷಗಾನ ಬೊಂಬೆಯಾಟ ತಂಡವಾಗಿದೆ. ಈ ಸಂಸ್ಥೆಯನ್ನು ೧೯೮೧ರಲ್ಲಿ ವಿದ್ವಾನ್ ಲಕ್ಷ್ಮೀನಾರಾಯಣಯ್ಯ ಮತ್ತು ಕೆ. ವೆಂಕಟಕೃಷ್ಣಯ್ಯ ಅವರು ಸ್ಥಾಪಿಸಿದ್ದು, ಅವರು ಯಕ್ಷಗಾನದ ಪಿತಾಮಹನೆಂದು ಖ್ಯಾತರಾದ ಕುಂಬಳೆ ಪಾರ್ತಿಸುಬ್ಬ ಅವರ ವಂಶಜರು ಎಂದರು.

ಯಕ್ಷಪುತ್ಥಳಿ ಬೊಂಬೆ ಮ್ಯೂಸಿಯಂ: ಸಂಸ್ಥೆಯ ಮಹತ್ವಾಕಾಂಕ್ಷಿ ಕನಸಾದ ‘ಯಕ್ಷ ಪುತ್ಥಳಿ ಬೊಂಬೆ ಮನೆ’ ಯೋಜನೆಯಡಿ, ವಿಶ್ವದ ಮೊದಲ ಯಕ್ಷಗಾನ ಬೊಂಬೆ ಮ್ಯೂಸಿಯಂ ಸ್ಥಾಪನೆಯ ಗುರಿಯಿದೆ. ಸುಮಾರು 1000 ಮರದ ಯಕ್ಷಪುತ್ಥಳಿಗಳನ್ನು ನಿರ್ಮಿಸಿ ಪ್ರದರ್ಶಿಸುವ ಯೋಜನೆ ಇದಾಗಿದ್ದು, ಪ್ರತಿ ಬೊಂಬೆಯ ಅಂದಾಜು ವೆಚ್ಚ 36 ಸಾವಿರ ಆಗಿದೆ. ಒಟ್ಟು ಯೋಜನಾ ವೆಚ್ಚ ಸುಮಾರು  3.75 ಕೋಟಿ ಆಗಲಿದೆ ಎಂದರು.

ಫೆ.೬ರಂದು ನಡೆಯುವ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಅಭಿಯಾನವು ಯಕ್ಷಗಾನ ಬೊಂಬೆಯಾಟವನ್ನು ಸಮಾಜದ ಗಣ್ಯರು, ಕಲಾಭಿಮಾನಿಗಳು ಹಾಗೂ ಯುವ ಪೀಳಿಗೆಗೆ ಮತ್ತೊಮ್ಮೆ ಪರಿಚಯಿಸುವ ಮಹತ್ವದ ವೇದಿಕೆಯಾಗಲಿದೆ ಎಂದರು. 

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ರಾಧಾಕೃಷ್ಣ ಉಳಿಯತಡ್ಕ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು, ಎಸ್.ಎಲ್.ಭಾರದ್ವಾಜ್, ಅಚಲ್ ಭಟ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article